ಬಸವಾದಿ ಪ್ರಮಥರ 12ನೇ ಶತಮಾನದ ವಚನ ಸಾಹಿತ್ಯ, ವಿಶ್ವ ಪ್ರಜಾ ಪ್ರಭುತ್ವಕ್ಕೆ ಅಡಿಗಲ್ಲು ಹಾಕಿದ ಐತಿಹಾಸಿಕ, ಕ್ರಾಂತಿಕಾರಿ,ಜನಪರ ಸಾಹಿತ್ಯವಾಗಿದೆ. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಶ್ರೇಷ್ಠ ಸಾಹಿತ್ಯವೂ
ಹೌದು. ವಚನ ವಾಙ್ಮಯದ ಜನಪ್ರಿಯತೆಗೆ ಕಾರಣಗಳು ಹಲವಾರು ಇವೆ. ಮುಖ್ಯವಾಗಿ ಸಮಾನತೆ, ಸಹೋದರತ್ವ, ಸಹಬಾಳ್ವೆ, ಸೌಹಾರ್ದತೆ, ಮಾನವೀಯತೆ, ದಯೆ, ಕರುಣೆ, ಪ್ರೀತಿ, ಸ್ನೇಹ ಸೇರಿದಂತೆ ಲಕ್ಷಾಂತರ ವಿಚಾರಗಳ ಸಂಗಮವೇ ಈ ಸಾಹಿತ್ಯದಲ್ಲಿ ದೊರೆಯುತ್ತದೆ. ಇಲ್ಲಿ ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು.
ವಚನಗಳು ಕ್ಲಿಷ್ಟವಾಗಿರದೆ ಸರಳವಾಗಿವೆ. ಇಲ್ಲಿಯ ಭಾಷೆ, ಶೈಲಿ, ಲಲಿತವಾಗಿ ಸುಲಭವಾಗಿ ಉಚ್ಚರಿಸಲು ಸಾಧ್ಯವಿದೆ. ಸೂಕ್ಷ್ಮವಾಗಿ ವಿಚಾರಿಸಿದರೆ ವಚನಗಳು ಗದ್ಯ- ಪದ್ಯದ ಒಂದು ಅಪರೂಪದಲ್ಲಿ ಅಪರೂಪದ ಸಾಹಿತ್ಯವೆಂದೇ ಹೇಳಬಹುದು.
ಅಂದಿನ ಪ್ರತಿಯೊಬ್ಬ ಶರಣರು ಅವರ ಕಾಯಕದ ಮಹತ್ವವನ್ನು ಸಾರಿ, ವಚನಗಳು ರಚಿಸಿ, ಮಾನವೀಯತೆಯ ಮೌಲ್ಯಾಧಾರಿತ ಸಿದ್ದಾಂತವನ್ನು ಸರ್ವರಿಗೂ ಉಣಬಡಿಸಿದ್ದಾರೆ. ಇವರಲ್ಲಿ ಅಗ್ರಗಣ್ಯ ಶರಣರೆಂದರೆ ಜೇಡರ್ ದಾಸಿಮಯ್ಶ ಶಿವಶರಣರು ಸಹ ಒಬ್ಬರು. ಇವರ ಕುರಿತು ಬರೆಯುವ ಸಣ್ಣ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಜೇಡರ ದಾಸಿಮಯ್ಯ ಶರಣರು, ಹನ್ನೆರಡನೇಯ ಶತಮಾನದ ಆರಂಭದಲ್ಲಿ ಬಂದಂತಹ ಪ್ರಮುಖ ಶರಣರು. ಆದರೆ ಇಲ್ಲಿ
ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ಚಿಂತಕರು ವ್ಯಕ್ತಪಡಿಸಿರುವರಾದರೂ, ಈ ಎರಡು ಹೆಸರುಗಳ ಕುರಿತು ಸಂಶೋಧನೆ ಮಾಡುವುದು ಅಗತ್ಯವಾಗಿದೆ. ಕಾಯಕಯೋಗಿಯಾಗಿ ಕಾಯಕ ಮಾಡಿ, ವಚನಗಳು ರಚಿಸಿದವರು ದಾಸಿಮಯ್ಯ ಶರಣರು ಎಂಬುದು ಅಧ್ಯಯನದ ಮೂಲಕ ತಿಳಿದು ಬರುತ್ತದೆ.
ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತದೆ. ಸುರಪುರ ತಾಲೂಕಿನ ಮುದನೂರು ಗ್ರಾಮದವರಾದ ಶರಣ ದಾಸಿಮಯ್ಯ ತನ್ನ ಸತಿ ದುಗ್ಗಲೆಯೊಂದಿಗೆ ಕಾಯಕವನ್ನೇ ಕೈಲಾಸವಾಗಿಸಿಕೊಂಡ ಮಾಹಾ ಸಾಧಕ ಶರಣರು.
ದಾಸಿಮಯ್ಯನವರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಬಿ ಗ್ರಾಮದಲ್ಲಿ ರಾಮಯ್ಯ ಮತ್ತು ಶಂಕರಿ ದಂಪತಿಯ ಪುತ್ರನಾಗಿ ಜನಿಸಿದರು. ಉತ್ತಮ ಸಂಸ್ಕಾರ ಪಡೆದ ಜ್ಞಾನವಂತರಾದವರು. ದಾಸಿಮಯ್ಯನವರು ಯಾವಾಗಲೂ,ಯಾವುದನ್ನೂ ಪ್ರಶ್ನಿಸದೆ ಸ್ವೀಕರಿಸುವ ಮನೋಭಾವದವರಾಗಿರಲಿಲ್ಲ. ಪ್ರಖರ ವೈಚಾರಿಕ, ವೈಜ್ಞಾನಿಕ ನೆಲೆಗಟ್ಟಿನ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು ಎಂಬುದು ತಿಳಿದುಬರುತ್ತದೆ. ಈ ದಿಸೆಯಲ್ಲಿಯೂ ಹೆಚ್ಚಿನ ಸಂಶೋಧನೆ ಮಾಡುವುದು ಸಹ ಅಗತ್ಯವಾಗಿದೆ.
ಹಾಗೆಯೇ ವರ್ಗ, ವರ್ಣ, ಲಿಂಗ ಅಸಮಾನತೆ ಹೋಗಲಾಡಿಸಿ, ಸಮಾನತೆ ತಂದವರು. ಬಸವಣ್ಣ ಸೇರಿದಂತೆ ಇತರೆ ವಚನಕಾರರಿಗೆ ದಾಸಿಮಯ್ಯ ಶರಣರೇ ಸ್ಪೂರ್ತಿ ಮತ್ತು ಪ್ರೇರಕ ಶಕ್ತಿ ಆಗಿದ್ದರು. ಇವರ ವಚನಗಳು ಸಮಾಜಕ್ಕೆ ಅತ್ಯಂತ ಪ್ರೇರಣದಾಯಕವಾಗಿವೆ.
ಅಂದಹಾಗೆ ಜೇಡರ್ ದಾಸಿಮಯ್ಯ ಶರಣರ ವಚನಗಳಲ್ಲಿ ಹೆಚ್ಚಾಗಿ ಆದ್ಯಾತ್ಮ ಸಿರಿವಂತಿಕೆಯಿಂದ ಮೆರೆದಿದ್ದು ನೋಡಬಹುದು. ದಾಸಿಮಯ್ಯನವರು ಅಸಮಾನ್ಯ ವ್ಯಕ್ತಿತ್ವವನ್ನು ಬೆಳೆಸಿಕೊಂಡವರು. ಷಟ್‌ಸ್ಥಲಾಚರಣೆ ಹಾಗೂ ಶಿವಯೋಗ ಸಾಧನೆಗೆ ಅನುಸಂಧಾನ ಮೊದಲ ಮೆಟ್ಟಿಲು ಹತ್ತಿದವರು. ವ್ಯಕ್ತಿಗೆ ಸಮ್ಯಕ್ ಜ್ಞಾನೋದಯ ಉಂಟಾದ ಕೂಡಲೇ ಅಂತರಂಗ–ಬಹಿರಂಗಗಳ ಸೂಕ್ಷ್ಮ ನಿರೀಕ್ಷಣೆಯ ವಿಮರ್ಶೆ ನಡೆಯಬೇಕೆಂದವರು. ಅವರು ತಮ್ಮ ಅಂತರಂಗವನ್ನು ಪರಿಶೋಧಿಸಿ, ಇರುವ ಕಲ್ಮಶವನ್ನು ದೂರೀಕರಿಸಿ ಅಂತರಂಗಶುದ್ಧಿಯನ್ನು ಪಡೆದವರು. ಇಂತಹ ಅನೇಕ ವೈಜ್ಞಾನಿಕ ಚಿಂತನೆಗಳು ದಾಸಿಮಯ್ಯನವರ ಜೀವನದಲ್ಲಿ ವಿಮರ್ಶೆ ಮತ್ತು ಶೋಧನೆಗಳು ನಡೆದುದು ಕಂಡುಬರುತ್ತದೆ. ಇದರಲ್ಲಿ ಇವರ ಒಂದು ವಚನ ಗಮನಿಸಬಹುದು.
ಮೊಲೆ ಮೂಡಿ ಬಂದರೆ ಹೆಣ್ಣೆಂಬರು
ಗಡ್ಡ ಮೀಸೆ ಬಂದರೆ ಗಂಡೆಂಬರು
ನಡುವೆ ಸುಳಿಯುವಾತ್ಮನು
ಹೆಣ್ಣೂ ಅಲ್ಲ, ಗಂಡೂ ಅಲ್ಲ ರಾಮನಾಥ. ಎನ್ನುವ ವಚನ ಸೇರಿದಂತೆ ಅವರ ಇನ್ನೀತರ ವಚನಗಳಲ್ಲಿ
ಯೋಗ್ಯ ಗುರುವಿನ ಲಕ್ಷಣ, ಭಕ್ತಾಭಿಮಾನ, ದಾಸ್ಯಭಾವ, ಸಮರ್ಪಣಾಭಾವ, ಲಿಂಗಾಯತ ಧರ್ಮ ನಿಷ್ಠೆ, ವೈಚಾರಿಕ ನೀತಿ ಮೊದಲಾದ ವಿಷಯಗಳು ದಾಸಿಮಯ್ಯುನರ ವಚನಗಳಲ್ಲಿ ಕಾಣಬಹುದಾಗಿದೆ.
ಇನ್ನು ತನ್ನ ಅನುಭವಕ್ಕೆ ನಿಲುಕದ ಯಾವುದೇ ಸಂಗತಿಯನ್ನು ಅವರು ಹೇಳುವುದಕ್ಕೆ ಹೋಗಿಲ್ಲ. ಅನುಭವವು ಸಹೃದಯರಿಗೆ ತಲುಪುವಂತೆ ಮಾಡಿದ್ದಾರೆ. ಭಾಷೆಯಲ್ಲಿ ಸರಳತೆ ಕಂಡುಬಂದರೂ ಭಾವದಲ್ಲಿ ಅರ್ಥ ಶ್ರೀಮಂತಿಕೆ ಎದ್ದುಕಾಣುತ್ತದೆ. ಇವರ ವಚನಗಳಲ್ಲಿ ಸತ್ಯವನ್ನು ನೇರವಾಗಿ ಪ್ರತಿಪಾದಿಸಿದ್ದಾರೆ. ಅಂದರೆ ಯಾವುದೇ ಮುಲಾಜಿಲ್ಲದೆ ಇದ್ದಿದ್ದು ಇದ್ದ ಹಾಗೆ ಹೇಳಿದಾರೆ. ಕಟುವಾಗಿ ವಿಮರ್ಶಿ, ವಿಡಂಬನಾತ್ಮಕವಾಗಿ ಚಿತ್ರಿಸಿ, ಸಮಾಜಕ್ಕೆ ಎಚ್ಚರಿಸಿ, ಸಮಾಜವನ್ನು ಸರಿದಾರಿಗೆ ತರುವ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದಾರೆ.
ಶರಣ ದಾಸಿಮಯ್ಯನವರು ತನ್ನ ಬುದ್ಧಿಯ ಮಿಂಚಿಗೆ, ಭಾವದ ಬೆಳಕಿಗೆ ಅನುಭಾವದ ಉಸಿರಿಗೆ ಆಕಾರವನ್ನು ನೀಡುವಾಗ ಆಡು ನುಡಿಯನ್ನು ಬಳಸಿ ಕೊಂಡುದುದರಿಂದ ಅವರ ಭಾಷೆಯಲ್ಲಿ ಕಸುವಿದೆ, ಕಾವಿದೆ, ಹೊಸತನವಿದೆ, ಜೀವಂತಿಕೆಯಿದೆ. ಸಾಹಿತ್ಯ, ಭಾವ, ಕಾವ್ಯ, ಭಾಷೆ, ಸೌಂದರ್ಯ ಎಲ್ಲ ದೃಷ್ಟಿಯಿಂದಲು ದಾಸಿಮಯ್ಯನ ವಚನಗಳು ತುಂಬ ಎತ್ತರಕ್ಕೆ ನಿಲ್ಲುತ್ತವೆ. ದಾಸಿಮಯ್ಯನ ವಚನಗಳಲ್ಲಿ ತತ್ತ್ವದ ಶುಷ್ಕವಾದ ನಿರೂಪಣೆಯಿಲ್ಲ. ಉದಾತ್ತವಾದ ಭಾವಗಳನ್ನು ಬಹು ಚಮತ್ಕಾರವಾಗಿ ಸುಲಭವಾದ ಮಾತುಗಳಲ್ಲಿ ಓದಿದೊಡನೆಯೇ ಮನಸ್ಸಿಗೆ ಹಿಡಿಯುವ ಹಾಗೆ ಒಂದೊಂದು ಅರ್ಥಗರ್ಭವಾದ ಉಪಮಾನದಿಂದ ಒಂದೊಂದು ದೊಡ್ಡ ಚಿತ್ರವೇ ಕಣ್ಣಮುಂದೆ ನಿಂತ ಹಾಗೆ ಕಾಣುತ್ತವೆ. ಜೊತೆಗೆ ನವಸಮಾಜದ ದೃಷ್ಟಿಯಿಂದ ದಾಸಿಮಯ್ಯನವರು ಪ್ರಾರಂಭಿಸಿದ ವೈಚಾರಿಕ ಧರ್ಮದ ಸಾಮಾಜಿಕ ಸುಧಾರಣೆಗಳು ಮುಂದುವರಿದು ಬಸವಣ್ಣನವರ ಮತ್ತು ಸಮಕಾಲೀನ ಶರಣರ ಕಾಲದಲ್ಲಿ ಸಮ ಸಮಾಜದ ನಿರ್ಮಾಣಕ್ಕೆ ಅಡಿಪಾಯವಾಗಿಯೇ ಲಿಂಗಾಯತ ಧರ್ಮ ಉಗಮಕ್ಕೆ ಕಾರಣವಾಗಿತ್ತು.
ಉತ್ಕಟವಾದ ಲಿಂಗಾಯತ ಧರ್ಮ ನಿಷ್ಠೆ ಹೊಂದಿದ ಇವರು, ನಿಷ್ಠುರವಾದ ಸ್ಪಷ್ಟ ವಾಕ್ಯತೆ, ಮಾರ್ಮಿಕವಾದ ಸಂಕ್ಷಿಪ್ತ ಶೈಲಿ, ಔಚಿತ್ಯಪೂರ್ಣವಾದ ದೃಷ್ಟಾಂತಗಳ ಸೈದ್ಧಾಂತಿಕ, ಪ್ರಗತಿಪರ ಗುಣಗಳು ಇವರ ವಚನಗಳಲ್ಲಿ ಎದ್ದು ಕಾಣುತ್ತವೆ. ಅದಕ್ಕಾಗಿಯೇ ಸ್ವತಂತ್ರ ವಿಚಾರ ವ್ಯಕ್ತಿತ್ವದಿಂದ ಘನತೆಯನ್ನು ಪಡೆದಿರುವ ದಾಸಿಮಯ್ಯ ಶರಣರು ಇಂದಿನ ಸಮಾಜಕ್ಕೆ ಆದರ್ಶಪ್ರಾಯವಾಗಿ ನಿಲ್ಲುತ್ತಾರೆ.
ಗೌರವದ ನುಡಿ: ಶರಣ ದಾಸಿಮಯ್ಯನವರು ಹನ್ನೆರಡನೇ ಶತಮಾನದಲ್ಲಿ ಮೊಟ್ಟ ಮೊದಲು ಶರಣರ ಚಳವಳಿ ಕಟ್ಟಿ, ಮಾನವೀಯ ಮೌಲ್ಯ ಬಿತ್ತಿದ ಶ್ರೇಷ್ಠ ವಚನಕಾರರು. ಇವರ ಆದರ್ಶ ವ್ಯಕ್ತಿತ್ವ ಬಸವಣ್ಣ ಹಾಗೂ ಇತರ ಶರಣರ ಮೇಲೆ ಪ್ರಭಾವ ಬೀರಿವೆ. ಬಸವಣ್ಣನವರ ಸಮಗ್ರ ಜನಪರ ಕಾರ್ಯಗಳಿಗೆ ದಾಸಿಮಯ್ಯನವರೇ ಪ್ರೇರಕ ಶಕ್ತಿ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ನ್ಯಾಯಬದ್ಧವಾದ ವಿಚಾರ ಮತ್ತು ಸೌಜನ್ಯದಿಂದಲೇ ಇಡೀ ಶರಣರ ಸಂಕುಲಕ್ಕೆ ಇವರೇ ಮಾರ್ಗದರ್ಶಕರಾಗಿದ್ದರು. ರಾಮನಾಥ ಎಂಬ ಅಂಕಿತನಾಮವನ್ನು ಬಳಸಿಕೊಂಡು ಸುಮಾರು 176 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ.
ಆಶಯ ಮಾತು: ಲಿಂಗಾಯತ ಧರ್ಮದ ಸಿದ್ದಾಂತವನ್ನು ಪ್ರತಿಪಾದಿಸಿ, ಭೋದಿಸಿರುವ ಬಸವಾದಿ ಶರಣರ ಹಾಗೂ ದಾಸಿಮಯ್ಯ ಶರಣರ ಆಶಯದಂತೆ ನಾವೆಲ್ಲರೂ ಅವರ ದಾರಿಯಲ್ಲಿ ಸಾಗುವಂತಹ ಕೆಲಸ ಮಾಡಲೇಬೇಕು. ಅಂದಾಗಲೇ ಮಾತ್ರ ಈ ಶರಣರ ವಾರಸುದಾರರಾಗಲು ಸಾಧ್ಯ ಮತ್ತು ಇವರ ಜಯಂತಿ ಆಚರಣೆ ಮಾಡಿದಕ್ಕೂ ಸ್ವಾರ್ಥಕವಾಗಲಿದೆ.
♦ಸಂಗಮೇಶ ಎನ್ ಜವಾದಿ
ಬರಹಗಾರರು,ಚಿಂತಕರು, ಹೋರಾಟಗಾರರು.