ಅನುಭವ ಮಂಟಪವೆಂಬುದು ಕಾಯಕ ವರ್ಗದ ಶರಣರ ವಾಕ್ ಸ್ವಾತಂತ್ರ್ಯದ ತಾಣವಾಗಿತ್ತು. ಕನ್ನಡ ಭಾಷೆಯಲ್ಲಿ ಶರಣರು ವಚನಗಳನ್ನು ರಚಿಸುವ ವಾತಾವರಣ ಸೃಷ್ಟಿಸಿ, ಸಹಸ್ರಾರು ವರ್ಷಗಳಿಂದ ತುಂಬಿಕೊಂಡಿದ್ದ ಅನ್ಯಾಯ, ಅಸಮಾನತೆ, ಅಂಧಕಾರ ವಿರುದ್ಧ ಹೋರಾಡಿದರು. ಹೀಗೆ ಬಸವಣ್ಣವರು ವ್ಯಷ್ಟಿ ಮತ್ತು ಸಮಷ್ಟಿ ಪ್ರಜ್ಞೆಯೊಂದಿಗೆ ಶೋಷಣೆ ಇಲ್ಲದ ನವಸಮಾಜದ ನಿರ್ಮಾಪಕರಾದರು. ಬಸವಣ್ಣನವರ ಮಾರ್ಗದರ್ಶನದಲ್ಲಿ 12ನೇ ಶತಮಾನದಲ್ಲಿ ದುಡಿಯುವ ವರ್ಗದ ಶರಣರು ಐತಿಹಾಸಿಕ ಕ್ರಾಂತಿ ಮಾಡಿ, ಸಾಧಿಸಿದ್ದು ಸಣ್ಣ ಮಾತಲ್ಲ.
ಅಂದಹಾಗೇ ನವ ಸಮಾಜದ ನಿರ್ಮಾಣದಲ್ಲಿ ಕಾಯಕದ ಪಾತ್ರ ಮಹತ್ವದ್ದಾಗಿದೆ. ದಯವೇ ಧರ್ಮದ ಮೂಲ ಎಂದು ಹೇಳಿದ ಬಸವಣ್ಣನವರಿಗೆ ಆ ದಯೆಯೇ ಮೂಲ ಕಾಯಕದಲ್ಲಿದೆ ಎಂಬದು ಗೊತ್ತಿತ್ತು. ಬರಿ ಮಾತಿನ ದಯೆಯಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ದಯೆಯು ವಾಸ್ತವಕ್ಕೆ ಇಳಿಯಬೇಕಾದರೆ ಕಾಯಕದಿಂದ ಮಾತ್ರ ಸಾಧ್ಯ ಎಂದು ತಿಳಿದ ಬಸವಣ್ಣನವರು ಕಾಯಕ ನಿಸ್ವಾರ್ಥ ಸೇವೆಗೆ ಎಲ್ಲಿಲ್ಲದ ಮಹತ್ವ ನೀಡಿದರು. ಅಂತೆಯೇ ‘ಆನುಪರಸೇವೆಯಮಾಡುವೆನಯ್ಯಾ ಜಂಗಮ ದಾಸೋಹಕ್ಕೆಂದು’ಬಸವಣ್ಣನವರು ತಿಳಿಸಿದ್ದಾರೆ. ಬಸವಣ್ಣವರ ಧಾರ್ಮಿಕ ಪರಿಭಾಷೆಯಲ್ಲಿ’ದಯೆ’ ಎಂಬುದು ಸಮಾಜ ಸೇವೆ (ಜಂಗಮ ದಾಸೋಹ) ಆಗಿದೆ. ಕಾರಣ ಕಾಯಕ ಮಾಡದೆ ಸಮಾಜ ಸೇವೆ ಮಾಡಲು ಸಾಧ್ಯವಿಲ್ಲ. ಸಮಾಜ ಸೇವೆ ಮಾಡದೆ ಧರ್ಮವಂತರಾಗಲು ಸಾಧ್ಯವಿಲ್ಲ ಎಂದು ಎನ್ನುತ್ತಾ, ದುಡಿಯವ ವರ್ಗವೇ ನಿಜವಾದ ಧರ್ಮವಂತ ವರ್ಗವಾಗಿದೆ ಎಂದಿದ್ದಾರೆ ಬಸವಣ್ಣನವರು.
ಇನ್ನು ಕಾಯಕ, ಪ್ರಸಾದ ಮತ್ತು ದಾಸೋಹ ಪದಗಳು ಧರ್ಮಶಾಸ್ತ್ರದ ಪದಗಳಷ್ಟೇ ಅಲ್ಲದೆ ಬಸವಣ್ಣನವರ ಅರ್ಥಶಾಸ್ತ್ರದಪದಗಳೂ ಆಗಿವೆ. ಕಾಯಕ ಎಂಬುದು ಯೋಗ್ಯ ಉತ್ಪಾದನೆ, ಪ್ರಸಾದ ಎಂಬುದು ಸದ್ಬಳಕೆ , ನಿಸ್ವಾರ್ಥ ಸೇವೆ ಎಂದರ್ಥ ಹಾಗೂ ದಾಸೋಹ ಅಂದರೆ ನಿಸ್ವಾರ್ಥ ಕಾಯಕದಿಂದ ಬಂದ ಹಣದಿಂದ ಬಡವ, ಬಲ್ಲಿದ ವ್ಯಕ್ತಿಗಳಿಗೆ ಪ್ರಸಾದ್ ವ್ಯವಸ್ಥೆ ಮಾಡಿ ಧನ್ಯರಾಗುವುದು ಎಂದರ್ಥವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ‘ಕಾಯಕವೇ ಕೈಲಾಸ’ ಎಂಬುದು ಕಾಯಕಜೀವಿಗಳ ನಿಸ್ವಾರ್ಥ ಸೇವೆಯ ಮೂಲಕ ಬಂದ ಹಣದಿಂದ ಧರ್ಮದ ಹಾಗೂ ಸಮಾಜದ ಸತ್ಕಾರ್ಯ ಮಾಡಿದ ಮಾತ್ರ ಕಾಯಕವೇ ಕೈಲಾಸದ ಪದಕ್ಕೆ ಮೌಲ್ಯಯುತ , ಅರ್ಥಪೂರ್ಣವಾದ ಅರ್ಥ ಬರುತ್ತದೆ ಎಂಬುದು ಶರಣರ ಸದಾಶಯವಾಗಿತ್ತು.
ಅದಕ್ಕಾಗಿಯೇ ಪ್ರತಿಯೊಬ್ಬರೂ ಕಾಯಕದಲ್ಲಿ ತೊಡಗುವುದರ ಮೂಲಕ ತನ್ನ ಅರಿವಿನ ವಿಸ್ತಾರದೊಂದಿಗೆ ಉತ್ಪಾದನಾ ವ್ಯವಸ್ಥೆಯ ಸದೃಢಗೊಳಿಸುತ್ತಾರೆ. ಅವರು ಉತ್ಪಾದಿಸಿದ್ದನ್ನು ಪ್ರಸಾದ ಪ್ರಜ್ಞೆಯಿಂದ ಸದ್ಬಳಕೆಮಾಡುವುದರ ಮೂಲಕ ಜನಸಮುದಾಯಕ್ಕೆ ವಸ್ತುವಿನ ಮಹತ್ವವನ್ನು ಅರಹುತ್ತಾರೆ. ದಾಸೋಹಂಭಾವದ ಮೂಲಕ ತನ್ನ ಬಳಿಯಲ್ಲಿದ್ದ ಉಳಿತಾಯವನ್ನು ಸಮಾಜದ ಸದ್ಬಳಕೆಗೆ ಉಪಯೋಗಿಸುತ್ತಾರೆ.
ಬಸವಣ್ಣನವರ ಕಾಯಕ ಶಾಸ್ತ್ರ ಹೊಸ ವಿಶಿಷ್ಟ ರೀತಿಯಲ್ಲಿ ಸರ್ವಸಮತ್ವಭಾವದೊಂದಿಗೆ ಬದುಕುವುದನ್ನು ಕಲಿಸುತ್ತದೆ. ಶರಣರು ವೈಯಕ್ತಿಕ ಸಂಪತ್ತನ್ನು ದಾಸೋಹ ಪ್ರಜ್ಞೆಯೊಂದಿಗೆ ಬಳಸುತ್ತ ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುತ್ತಿದ್ದರು. ಸಾಮಾಜಿಕ ಪ್ರಜ್ಞೆಯೊಂದಿಗೆ ಮಾನವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ, ಜಾತ್ಯತೀತ ಮನೋಭಾವ, ಲಿಂಗಭೇದ, ವರ್ಣಭೇದ ಮತ್ತು ವರ್ಗಭೇದಗಳನ್ನು ಅಲ್ಲಗಳೆಯುವ ಕ್ರಮ, ಕಾಯಕಜೀವಿಗಳ ಸಂಘಟನೆ, ಕಾಯಕಜೀವಿಗಳಿಗೆ ವಯಸ್ಕರ ಶಿಕ್ಷಣ, ದಲಿತ ಮತ್ತು ಮಹಿಳಾ ಶಿಕ್ಷಣ, ಮಂದಿರ ಮತ್ತು ಮೂರ್ತಿಗಳ ನಿರಾಕರಣೆ, ಶರಣ ಸಂಕುಲದ ಆರ್ಥಿಕ ಸಮಸ್ಯೆಯ ಪರಿಹಾರಕ್ಕಾಗಿ ವ್ಯವಸ್ಥೆಗೊಳಿಸಿದ ಮಹತ್ವ ಕಾರ್ಯವೇ ಕಾಯಕ ನಿಧಿ ಅಂದರೆ ತಪ್ಪಾಗಲಾರದು. ಹೀಗಾಗಿಯೇ ಕಾಯಕ ಜೀವಿಗಳ ಕೇಂದ್ರಿತ ಸಮಾಜ ವ್ಯವಸ್ಥೆ, ವಿವಿಧ ಸಾಮಾಜಿಕ ಮೂಲಗಳಿಂದ ಬಂದವರಿಗೆ ಅನುಭವ ಮಂಟಪದಲ್ಲಿ ಲಿಂಗಭೇದವಿಲ್ಲದ ಪ್ರಾತಿನಿಧ್ಯ, ಸಾಮೂಹಿಕ ಚಿಂತನೆ, ಕಾಯಕ, ಪ್ರಸಾದ ಮತ್ತು ದಾಸೋಹದ ಕುರಿತ ಸಮಾಜಮುಖಿ ಕ್ರಾಂತಿಕಾರಿ ಪರಿಕಲ್ಪನೆ ಮತ್ತು ಸಮೂಹ ನಾಯಕತ್ವ ಮುಂತಾದವು ಶರಣರ ಐತಿಹಾಸಿಕ, ಶ್ಲಾಘನೀಯ ಸೇವಾ ಕೊಡುಗೆಗಳಾಗಿವೆ.
ಹೀಗೆ ಬಸವಣ್ಣನವರ ಕಾಯಕ ಶಾಸ್ತ್ರದ ಕ್ರಾಂತಿಕಾರಿ ಚಟುವಟಿಕೆಗಳು ಮುಂದುವರಿಯುತ್ತಲೇ ಇದ್ದವು. ಅವರು ಅಸ್ಪೃಶ್ಯರನ್ನು ‘ಹಿರಿಯಮಾಹೇಶ್ವರರು’ ಎಂದು ಕರೆಯುತ್ತಿದ್ದರು. ಒಂದು ದಿನ ಬಸವಣ್ಣನವರು ಹೊಲಗೇರಿಯಲ್ಲಿನ ಸಂಬೋಳಿ ನಾಗಿದೇವನ ಮನೆಗೆ ಹೋಗಿ ಪ್ರಸಾದ ಸ್ವೀಕರಿಸಿದರು. ಮೈಲಿಗೆಗೊಂಡ ಬಸವಣ್ಣನವರು ಅಲ್ಲಿಂದ ನೇರವಾಗಿ ಅರಮನೆಗೆ ಬರುತ್ತಿದ್ದಾರೆ ಎಂದು ಮಂತ್ರಿಮಂಡಳದ ನಾರಣಕ್ರಮಿತ, ಕೃಷ್ಣಪೆದ್ದಿ, ವಿಷ್ಣುಭಟ್ಟ ಮತ್ತು ಕೇಶವಭಟ್ಟ ಮುಂತಾದವರು ಬಿಜ್ಜಳನ ಕಿವಿಯೂದಿದರು. ಅರಮನೆಯ ಅಂಗಳದಲ್ಲಿ ಒಡ್ಡೋಲಗದ ವ್ಯವಸ್ಥೆ ಮಾಡಿ ‘ಮೈಲಿಗೆಗೊಂಡ’ ಬಸವಣ್ಣನವರ ವಿಚಾರಣೆ ನಡೆಸಿದರು! ಹೀಗೆ ತುಳಿತಕ್ಕೊಳಗಾದವರ ಪರವಾಗಿ ನಿಂತು ಬಹಿರಂಗ ವಿಚಾರಣೆಗೊಳಗಾದ ಇನ್ನೊಬ್ಬ ಪ್ರಧಾನಿ ಎಲ್ಲಿಯೂ ಕಾಣ ಸಿಗುವುದಿಲ್ಲ.
ವೈದಿಕ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಕಾಯಕಸಿದ್ಧಾಂತದ ಆಧಾರದ ಮೇಲೆ ರಚಿತವಾದ ಶರಣಸಂಕುಲದಲ್ಲಿ ಜಾತಿಗಳು ನಾಶವಾಗಿ ಕೇವಲ ಬಸವಣ್ಣನವರ ನವಮಾನವಧರ್ಮ ಮಾತ್ರ ಬದುಕುವ ಮಾರ್ಗವಾಗಿತ್ತು. ಮನುಧರ್ಮದಲ್ಲಿನ ಶ್ರೇಣೀಕೃತ ಸಮಾಜದಲ್ಲಿ ಸಮಗಾರ ಜಾತಿಯವರಾಗಿದ್ದ ಹರಳಯ್ಯನವರು ಇಷ್ಟಲಿಂಗ ದೀಕ್ಷೆಯ ನಂತರ ಲಿಂಗವಂತರಾದರು. ಆಗ’ಸಮಗಾರ’ ಎಂಬುದು ಜಾತಿಯ ಸಂಕೇತವಾಗಿ ಉಳಿಯದೆ ಕೇವಲ ಕಾಯಕದ ಸಂಕೇತವಾಗಿ ಉಳಿಯಿತು. ಬಿಜ್ಜಳನ ಆಸ್ಥಾನದಲ್ಲಿದ್ದ ಮಧುವರಸರು ಬ್ರಾಹ್ಮಣರಾಗಿದ್ದರು. ಆದರೆ ಲಿಂಗದೀಕ್ಷೆಯ ನಂತರ ಲಿಂಗವಂತರಾದರು. ಈ ಇಬ್ಬರೂ ಬಸವಣ್ಣನವರ ಶರಣಸಂಕುಲದ ಸದಸ್ಯರಾದರು. ಹೀಗೆ ಸಮಗಾರ ಮೂಲದ ಶರಣ ಹರಳಯ್ಯನವರು ಮತ್ತು ಬ್ರಾಹ್ಮಣ ಮೂಲದ ಮಧುವರಸರು ತಮ್ಮ ಜಾತಿಗಳ ಕುರುಹನ್ನು ಕಳೆದುಕೊಂಡು ಬಸವಧರ್ಮದಲ್ಲಿ ಒಂದಾಗಿದ್ದರು.
ಕಾಯಕದ ಮಹತ್ವದ ಕುರಿತು ಶರಣೆ ಲಕ್ಕಮ್ಮನವರ ಒಂದು ವಚನ ಹೀಗಿದೆ, ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು. ಕಾಯಕವೆ ಕೈಲಾಸವಾದ ಕಾರಣ. ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.ಎನ್ನುವ ಈ ವಚನದಲ್ಲಿ ಕಾಯಕದ ಮಹತ್ವವನ್ನ ಅದರ ಶ್ರೇಷ್ಠತೆಯನ್ನ ಎತ್ತಿ ತೋರಿಸುವದರ ಜೊತೆಗೆ ಎಲ್ಲಾ ವೃತ್ತಿಗಳಿಗೆ ಶ್ರೇಷ್ಠ ಮಟ್ಟದ ಗೌರವ ನೀಡಿ ಕಾಯಕವನ್ನೆ ಕೈಲಾಸವನ್ನಾಗಿ ಮಾಡಿದರು. ಇದರ ಸಂಪೂರ್ಣ ಶ್ರೇಯಸ್ಸು ಶರಣರಿಗೆ ಸಲ್ಲುತ್ತದೆ. ಅಷ್ಟೆ ಏಕೆ ಆ ದೇವನಾದರು ಸಹಿತ ಕಾಯಕ ಮಾಡಲೆಬೇಕು ಎಂಬ ದಿಟ್ಟತನ ಎದೆಗಾರಿಕೆ ತೋರಿಸಿದು ಶರಣರಲ್ಲಿ ಕಾಣುತ್ತೇವೆ. ಹೀಗೆ ಶರಣ ಸಂಕುಲದ ಕಾಯಕ ವೃತ್ತಿಗೆ ಎಲ್ಲಿಲ್ಲದ ಮಹತ್ವ ನೀಡಿದರು.
ಅದಕ್ಕಾಗಿಯೇ 12 ನೇ ಶತಮಾನದ ನಮ್ಮ ಶರಣರು ಇಂದಿಗೂ ಅಜರಾಮರಾಗಿದ್ದಾರೆ. ಅಂದಿನ ದಿನಗಳಲ್ಲಿ ಎಲ್ಲರು ಕಾಯಕಜೀವಿಗಳೆಯಾಗಿದ್ದರು. ಹಾಗಾಗಿಯೇ ಅಲ್ಲಿ ಬೇಡುವವರಿಲ್ಲದೆ ನೀಡುವ ಶರಣರಿದರು. ಅದಕ್ಕೆ ಅಪ್ಪ ಬಸವಣ್ಣನವರು ತಮ್ಮ ಒಂದು ವಚನದ ಸಾಲಿನಲ್ಲಿ ” ಬೇಡುವವರಿಲ್ಲದೆ ನಾ ಬಡವನಾದೆನಯ್ಯಾ” ಎಂದು ಹೇಳುತ್ತಾರೆ.
ಅಂದಿನ ಶರಣರಿಗೆ ಕಾಯಕನಿಷ್ಠೆ ಕಾಯಕಪ್ರಜ್ಞೆ ಇತ್ತು ಮತ್ತು ತಾವು ಮಾಡುವ ಕಾಯಕದಲ್ಲಿ ಯಾವುದೇ ಭೇದವನ್ನ ಎಣಿಸಲಿಲ್ಲ, ಅಷ್ಟೊಂದು ಕಾಯಕದಲ್ಲಿ ಸಮಾನತೆ ತಂದಿದ್ದರು. ಶರಣರು ತಮ್ಮತಮ್ಮ ಕಾಯಕವನ್ನ ಕುರಿತು ತಮ್ಮ ಕಾಯಕದ ವೃತ್ತಿಪದಗಳನ್ನೆ ಬಳಸಿ ವಚನಗಳು ರಚಿಸಿದ್ದಾರೆ. ಶರಣರು ಕೇವಲ ಹಣ ಸಂಪಾದನೆಗಾಗಲಿ,ಆಹಾರ ಸಂಗ್ರಹಣೆಗಾಗಲಿ ಕಾಯಕ ಮಾಡಲಿಲ್ಲ. ಬದಲಾಗಿ ತಾವು ಮಾಡುವ ಕಾಯಕದಲ್ಲಿ ತಮಗೆ ಎಷ್ಟೊಂದು ಆತ್ಮತೃಪ್ತಿ ಸಿಗುತ್ತದೆಂಬುದನ್ನು ಸೂಕ್ಷ್ಮವಾಗಿ ಗ್ರಹಿಸಿಕೊಂಡು ಕಾಯಕ ಮಾಡುತ್ತಿದ್ದರು. ಕಾಯಕವೆಂಬುದು ನಮ್ಮ ಶರಣರ ಬದುಕಿಗೆ ಪ್ರಧಾನ ಸಂಜೀವಿನಿಯಾಗಿತ್ತು. ಏಕೆಂದರೆ ಕಾಯದಿಂದ ಮಾಡಿದ ನಿಸ್ವಾರ್ಥ ದಾಸೋಹ ಸೇವೆ ಜೀವನ್ಮುಕ್ತಿ ಎಂಬುದು ಅವರಿಗೆ ಚೆನ್ನಾಗಿ ಅರಿವಿತ್ತು. ಇಂಥ ಅತ್ಯಮೂಲ್ಯವಾದ ಕಾಯಕವನ್ನೆ ನಿಜವಾದ ಲಿಂಗಾರ್ಚನೆಯೆಂದು ಭಾವಿಸಿ ಎಚ್ಚೆತ್ತು ನಡೆದುಕೊಂಡಿದ್ದರು. ತಾವು ಮಾಡುವ ಕಾಯಕದಲ್ಲಿ ತನು ಸೇರಿಸಿ, ಮನ ಸವೆಸಿ ಮತ್ತು ಧನವನ್ನು ವಿನಿಯೋಗಿಸಿದವರು ನಮ್ಮ ಶರಣರು.
ಹಾಗಾಗಿ ನಮ್ಮ ಶರಣರಿಗೆ ” ಕಾಯಕವೇ ಕೈಲಾಸ” ಎಂಬುದು ಮೂಲ ಮಂತ್ರವಾಗಿತ್ತು. ಅನೇಕ ಶರಣರು ಅವರ ಕಾಯಕದಲ್ಲಿ ಮಗ್ನರಾದರೆ ಸಾಕು ಯಾವುದನ್ನು ಲೆಕ್ಕಿಸುತ್ತಿರಲಿಲ್ಲ. ಅದಕ್ಕೆ ಈ ಆಯ್ದಕ್ಕಿ ಮಾರಯ್ಯನವರ ಈ ಕೆಳಗಿನ ವಚನವೇ ಸಾಕ್ಷಿಪ್ರಜ್ಞೆಯಾಗಿದೆ
“ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ. ಭಾವಶುದ್ಧವಾಗಿ ಮಹಾಶರಣರ ತಿಪ್ಪೆಯ ತಪ್ಪಲ ಅಕ್ಕಿಯ ತಂದು ನಿಶ್ಚೈಸಿ ಮಾಡಬೇಕು ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ, ಬೇಗ ಹೋಗು ಮಾರಯ್ಯಾ.” ಎಂದು ತನ್ನ ಗಂಡನಿಗೆ ಕಾಯಕದ ಬಗ್ಗೆ ಎಚ್ಚರಿಕೆ ನೀಡುತ್ತಾಳೆ.
ಇಷ್ಟಲ್ಲದೆ ಹೆಚ್ಚಿಗೆ ಅಕ್ಕಿಯನ್ನು ತಂದಿದ್ದ ಗಂಡನನ್ನು ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ?” ಎಂದು ಪ್ರಶ್ನೆ ಮಾಡುವ ಮುಖಾಂತರ ಹೆಚ್ಚಾಗಿ ತಂದಂತ ಅಕ್ಕಿಯನ್ನು ಅಲ್ಲೆ ಹೋಗಿ ಸುರಿದು ಬಾ, ಎಂದು ಗಂಡ ಮಾರಯ್ಯನಿಗೆ ಬುದ್ಧಿ ಹೇಳಿ ಕಾಯಕಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಲು ಗಂಡನಿಗೆ ಆಜ್ಞಾಪಿಸಿದ ಮೊಟ್ಟಮೊದಲ ದಿಟ್ಟ ಶರಣೆ ಈ ಆಯ್ದಕ್ಕೆ ಲಕ್ಕಮ್ಮನಾಗಿದ್ದಾಳೆ ಎಂಬುದು ಕಾಣುತ್ತೇವೆ.
ಮತ್ತೊಂದು ಶರಣೆ ಲಕ್ಕಮ್ಮನವರ ವಚನ ಹೀಗಿದೆ,”ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು” ಎಂದು ಹೇಳಿದ್ದಾರೆ. ದುಡಿಮೆಯೆ ದುಡ್ಡಿನ ತಾಯಿಯೆ ಹೊರತು ದುಡಿಯದೇ ಬರುವ ಹಣ ಯಾವತ್ತಿಗೂ ಮನಶುದ್ಧಿ ನೀಡಲಾರದು ಎಂದು ತಾತ್ವಿಕ ವಿಚಾರವನ್ನು ಈ ಶರಣೆ ವಿವರಿಸಿದ್ದಾರೆ. ಹೀಗೆ ಅನೇಕ ಶರಣ ಶರಣಿಯರು ಕಾಯಕ ಮಹತ್ವದ ಕುರಿತಂತೆ ತಮ್ಮದೆಯಾದ ಅಭಿಪ್ರಾಯಗಳನ್ನು ಅವರುಗಳ ವಚನಗಳಲ್ಲಿ ನೋಡಬಹುದು.
“ಆವ ಕಾಯಕವಾದಡೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು, ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು ವ್ಯಾದಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ ಭಾಪು ಲದ್ದೆಯ ಸೋಮಾ ?”ಎಂದು ಪ್ರಶ್ನಿಸುವ ಮುಖಾಂತರ
ಇಡಿ ಸಮಷ್ಠಿಗೆ ಧೈರ್ಯದ ಮಾತುಗಳನ್ನ ಹೇಳಿದ್ದಾರೆ. ಅಂದರೆ ಸತ್ಯಶುದ್ಧ ಕಾಯಕವ ಮಾಡಿ ಎಲ್ಲರ ಜೊತೆಗೆ ಹಂಚಿಕೊಂಡು ಸಾಗಬೇಕು. ಸುಮ್ಮನೆ ಮರಣಕ್ಕೆ ಹೆದರದೇ ಕಾಯಕ ಜೀವಿಗಳಾಗಿ ಬದುಕಬೇಕೆಂದು ಕರೆ ನೀಡಿ, ಕಾಯಕದ ಬದುಕನ್ನು ಸರಳಿಕರಣಗೊಳಿಸಿದ್ದಾರೆ.
ಇನ್ನೊಂದು ವಚನದಲ್ಲಿ “ಆವ ಕಾಯಕವ ಮಾಡಿದಡೂ ಒಂದೆ ಕಾಯಕವಯ್ಯಾ. ಆವ ವ್ರತವಾದಡೂ ಒಂದೆ ವ್ರತವಯ್ಯಾ. ಆಯ ತಪ್ಪಿದಡೆ ಸಾವಿಲ್ಲ ; ವ್ರತ ತಪ್ಪಿದಡೆ ಕೂಡಲಿಲ್ಲ. ಕಾಕಪಿಕದಂತೆ ಕೂಡಲು ನಾಯಕನರಕ ಗಂಗೇಶ್ವರಲಿಂಗದಲ್ಲಿ.” ಎಂದು ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮನವರು ಹೇಳುತ್ತಾರೆ.
ಅಂದರೆ ಕಾಯಕದಲ್ಲಿ ಮೇಲು ಕಿಳೆಂಬುವುದಿಲ್ಲ. ಎಲ್ಲ ಕಾಯಕಗಳು ಸಮಾನ, ಅವು ಎಲ್ಲವೂ ಒಂದೇ, ನಮಗೆ ತ್ರಿಕರಣ ಶುದ್ಧಿಯಿಂದ ಮಾಡುವ ಎಲ್ಲ ವ್ರತಗಳು ಸಹಿತ ಒಂದೇ ಎಂಬ ಭಾವನೆಯ ಅನುಭವದ ಅಡಿಯಲ್ಲಿ ಈ ವಚನದ ಭಾವರ್ಥವಾಗಿದೆ.
ಹೀಗೆ ಅನೇಕ ಕಾಯಕದ ವರ್ಗದ ಶಿವಶರಣರು ಅವರ ಅನುಭಾವದ ಅನುಭವವನ್ನು ಜಾಗತಿಕ ಸಮುದಾಯದಕ್ಕೆ ಧಾರೆ ಎರೆದಿದ್ದಾರೆ. ಕಾಯಕಜೀವಿಗಳು ಸರಿಯಾಗಿ ತಮ್ಮ ಕಾಯಕವನ್ನು ಮಾಡಿಕೊಂಡು ಲೋಕಕ್ಕೆ ಮಾದರಿಯಾಗಿದ್ದಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ, ಅಣ್ಣ ಬಸವಣ್ಣನವರು ಕಲ್ಪಿಸಿಕೊಟ್ಟ ಕಾಯಕವನ್ನು ಅರಿತುಕೊಂಡು ಕಾಯಕದಲ್ಲಿ ಶಿವನನ್ನ ಸಾಕ್ಷತ್ಕರಿಗೊಂಡು ಜೀವನ್ಮುಕ್ತಿ ಕಾಣಬಹುದಾಗಿದೆ.
ಇಂಥ ಉನ್ನತ ವಿಚಾರದ ಕಾಯಕ ಸೇವೆಯ ಮಹತ್ವವನ್ನು ಅರಿತು, ಈ ಸಮಾಜದ ಸಮಷ್ಠಿಗಾಗಿ, ನಾವೆಲ್ಲ ಸತ್ಯಶುದ್ಧಕಾಯಕ ಮಾಡಿ ತನುವನ್ನು ಗುರುವಿಗೆ, ಮನವನ್ನು ಲಿಂಗಕ್ಕೆ, ಧನವನ್ನು ಜಂಗಮಕ್ಕೆ ಸವೆಸಿ, ನಿಸ್ವಾರ್ಥ ಕಾಯಕ ಸೇವೆ ಮಾಡಬೇಕು. ಅಂದಾಗಲೇ ಮಾತ್ರ ಮಾನವರ ಜನ್ಮ ಪಾವನವಾಗುತ್ತದೆ.
♦ ಸಂಗಮೇಶ ಎನ್ ಜವಾದಿ
ಪತ್ರಕರ್ತರು, ಚಿಂತಕರು, ಸಾಮಾಜಿಕ ಸೇವಕರು