● ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿದ್ಯಮಾನಗಳನ್ನು ಕ್ಷಣ ಕ್ಷಣದ ಮಾಹಿತಿಗಳನ್ನು ಜನರಿಗೆ ತಲುಪಿಸಿ, ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪತ್ರಿಕಾ ಮಾಧ್ಯಮದ ಎಲ್ಲಾ ಮಿತ್ರರಿಗೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಶುಭಾಶಯಗಳು. ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ಡಿಸೆಂಬರ್ 1993 ರಲ್ಲಿ ಯುನೆಸ್ಕೋದ ಸಾಮಾನ್ಯ ಸಮ್ಮೇಳನದ ಶಿಫಾರಸಿನ ಮೇರೆಗೆ ಘೋಷಿಸಿತು. ಅಂದಿನಿಂದ ವಿಂಡ್‌ಹೋಕ್ ಘೋಷಣೆಯ (ಮೇ-03) ವಾರ್ಷಿಕೋತ್ಸವವನ್ನು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವಾಗಿ ವಿಶ್ವಾದ್ಯಂತ ಆಚರಿಸಲಾಗುತ್ತದೆ. ಪತ್ರಿಕಾ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು, ಹಕ್ಕನ್ನು ಗೌರವಿಸುವ ಮತ್ತು ಎತ್ತಿಹಿಡಿಯುವ, ಸರ್ಕಾರಗಳ ಕರ್ತವ್ಯವನ್ನು ನೆನಪಿಸಲು ಆಚರಿಸಲಾಗುತ್ತದೆ. 1948 ರ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಆರ್ಟಿಕಲ್ 19 ರ ಅಡಿಯಲ್ಲಿ ಪ್ರತಿಪಾದಿಸಲಾದ ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿ ಹಿಡಿಯಲು ಈ ದಿನ ಆಚರಣೆ ಮಾಡಲಾಗುತ್ತದೆ.
● ಪ್ರಶಸ್ತಿ-ಪುರಸ್ಕಾರ:- ವಿಶ್ವದಲ್ಲಿ ಎಲ್ಲಿಯಾದರೂ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆ ಅಥವಾ ಪ್ರಚಾರಕ್ಕೆ ಮಹೋನ್ನತ ಕೊಡುಗೆ ನೀಡಿದ ಅರ್ಹ ವ್ಯಕ್ತಿ, ಸಂಸ್ಥೆಗೆ UNESCO/ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಯನ್ನು ನೀಡುವ ಮೂಲಕ UNESCO ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಗುರುತಿಸುತ್ತದೆ. 1986 ರ ಡಿಸೆಂಬರ್ 17 ರಂದು ಬೊಗೋಟಾದಲ್ಲಿ ಎಲ್ ಎಸ್ಪೆಕ್ಟಡಾರ್ ತನ್ನ ಪತ್ರಿಕೆಯ ಕಚೇರಿಯ ಮುಂದೆ ಹತ್ಯೆಗೀಡಾದ ಕೊಲಂಬಿಯಾದ ಪತ್ರಕರ್ತ ಗಿಲ್ಲೆರ್ಮೊ ಕ್ಯಾನೊ ಇಸಾಜಾ ಅವರ ಗೌರವಾರ್ಥವಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. 1997 ರಲ್ಲಿ ರಚಿಸಲಾದ ಈ ಬಹುಮಾನವನ್ನು 14 ಸುದ್ದಿ ವೃತ್ತಿಪರರ ಸ್ವತಂತ್ರ ತೀರ್ಪುಗಾರರ ಶಿಫಾರಸಿನ ಮೇರೆಗೆ ನೀಡಲಾಗುತ್ತದೆ. ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡುತ್ತಿರುವ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಸರ್ಕಾರೇತರ ಸಂಸ್ಥೆಗಳು ಮತ್ತು UNESCO ಸದಸ್ಯ ರಾಷ್ಟ್ರಗಳಿಂದ ಹೆಸರುಗಳನ್ನು ಸಲ್ಲಿಸಲಾಗುತ್ತದೆ. 2022 ರಲ್ಲಿ ಬೆಲಾರಸ್ ದೇಶದ ಬೆಲರೂಸಿಯನ್ ಅಸೋಸಿಯೇಷನ್ ಆಫ್ ಜರ್ನಲಿಸ್ಟ್ಸ್ ಎಂಬ ಸಂಸ್ಥೆಯು ಪ್ರಶಸ್ತಿಯನ್ನು ಪಡೆದುಕೊಂಡಿದ್ದರೆ, 2023 ರಲ್ಲಿ ಇರಾನ್ ದೇಶದ ನಿಲೂಫರ್ ಹಮೇದಿ, ಎಲಾಹೆ ಮೊಹಮ್ಮದಿ, ನರ್ಗೆಸ್ ಮೊಹಮ್ಮದಿ ಎಂಬುವವರು ಜಂಟಿಯಾಗಿ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿದ್ದಾರೆ.
● ಪತ್ರಿಕಾ ಸೂಚ್ಯಂಕ ಮತ್ತು ಭಾರತ:- ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು ಸ್ಥಿರವಾಗಿ ಕಳಪೆ ಶ್ರೇಯಾಂಕವನ್ನು ಹೊಂದಿದೆ, ಇದು 2022 ರಲ್ಲಿ 150 ನೇ ಸ್ಥಾನದಲ್ಲಿದ್ದದ್ದು, 2023 ರಲ್ಲಿ 161 ಕ್ಕೆ ಇಳಿದಿದೆ. ಇತ್ತೀಚಿನ ಪತ್ರಕರ್ತರ ವಿರುದ್ಧದ ಹಿಂಸಾಚಾರಕ್ಕೆ ಇದಕ್ಕೆ ಕಾರಣವಾಗಿರಲೂಬಹುದು. 2021 ರಲ್ಲಿ ಈ ಸಮೀಕ್ಷೆಯನ್ನು ನಡೆಸುವವರೆಗೆ ದೇಶದಲ್ಲಿ ನಾಲ್ಕು ಪತ್ರಕರ್ತರು ಕೊಲ್ಲಲ್ಪಟ್ಟಿದ್ದರು ಮತ್ತು ಏಳು ಪತ್ರಕರ್ತರನ್ನು ಜೈಲಿನಲ್ಲಿಡಲಾಗಿತ್ತು. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವು ಕೇವಲ ಮಾಧ್ಯಮ ಸ್ವಾತಂತ್ರ್ಯದ ಸೂಚ್ಯಂಕವಲ್ಲ. ಇದು ರಾಜತಾಂತ್ರಿಕ ಸಾಧನವಾಗಿದೆ. ಸೂಚ್ಯಂಕದಲ್ಲಿನ ಶ್ರೇಯಾಂಕವು ಸಂಬಂಧಪಟ್ಟ ದೇಶಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಿನ್ನಡೆಯನ್ನು ತರಬಹುದು.
● ಅದೇನೇ ಇದ್ದರೂ ಸಹ, ದಮನಿತರ ನೋವಿಗೆ ಧ್ವನಿಯಾಗಿ ನ್ಯಾಯ ಒದಗಿಸಿಕೊಡುವ ಅಕ್ಷರ ಲೋಕವಾಗಿ ಪತ್ರಿಕೋದ್ಯಮ ಕಾರ್ಯನಿರ್ವಹಿಸುತ್ತದೆ. ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾಗಿದ್ದು ಜನಸಾಮಾನ್ಯರು ಮತ್ತು ಸರ್ಕಾರಗಳ ನಡುವೆ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರಭಾವಿಗಳ ಪ್ರಭಾವ, ಮಾಧ್ಯಮ ಕಾರ್ಯಕರ್ತರಿಗೆ ಪ್ರಾಣ ಬೆದರಿಕೆಗಳಂತಹ ಸಮಸ್ಯೆಗಳು ಭಾರತೀಯ ಮಾಧ್ಯಮಗಳು ಎದುರಿಸುತ್ತಿರುವ ಕೆಲವು ಸವಾಲುಗಳಾಗಿವೆ. ಈ ಸವಾಲುಗಳು ಪತ್ರಿಕಾ ಅಸ್ತಿತ್ವದ ಕಾರಣವನ್ನು ಪ್ರಶ್ನಿಸುತ್ತವೆ ಮತ್ತು ಇದರಿಂದಾಗಿ ದೇಶದ ಪ್ರಜಾಪ್ರಭುತ್ವ ರಚನೆಗೆ ಭಾರಿ ಅಪಾಯವಾಗಿದೆ. ಪತ್ರಿಕಾ ಮಾದ್ಯಮ ಎಂಬುದು ಸಮಾಜದ ಕನ್ನಡಿ ಎಂದು ಹೇಳಲಾಗುತ್ತದೆ, ಸತ್ಯವನ್ನು ಪ್ರತಿಬಿಂಬಿಸುತ್ತದೆ. ಪತ್ರಿಕಾ ಸ್ವಾತಂತ್ರ್ಯ ಮತ್ತು ಸಮಾಜದ ಬಗ್ಗೆ ಅದು ಹೊಂದಿರುವ ಜವಾಬ್ದಾರಿಗಳ ಸಂಕೇತವಾಗಿದೆ, ಈ ದಿನವು ವಿಶ್ವದಲ್ಲೇ ಪತ್ರಿಕಾ ಸ್ವಾತಂತ್ರ್ಯವನ್ನು ಗುರುತಿಸುತ್ತದೆ. ಸಮಾಜದ ಅಂಕುಡೊಂಕುಗಳನ್ನು ಜಗದ ಮುಂದಿಡುವ ನಿರ್ಭೀತ ರಂಗದ ಸೇವೆಗೆ ಒಂದು ಸೆಲ್ಯೂಟ್ ಹೇಳೋಣವೇ…
ಎನ್.ಎನ್.ಕಬ್ಬೂರ
ಶಿಕ್ಷಕರು ಮತ್ತು ಬರಹಗಾರರು
ತಾ-ಸವದತ್ತಿ ಜಿ-ಬೆಳಗಾವಿ
ಮೊಬೈಲ್-9740043452