ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ವಿವಿಧ ಕಾಯಕಗಳ ಶರಣರಿಗೆ, ಮಹಿಳೆಯರಿಗೆ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಮಾನತೆಯ ಸೌಭಾಗ್ಯವನ್ನು ಕರುಣಿಸಿ, ಶಿಕ್ಷಣ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದರು. ಅವರೆಲ್ಲ ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಭಾರತದಲ್ಲಿ ವಿವಿಧ ಜಾತಿಗಳ ಕಾಯಕಜೀವಿಗಳು ಮೊದಲ ಬಾರಿಗೆ ಜಾತಿಯನ್ನು ಮೀರಿ ಒಂದು ಕಾಯಕ ವರ್ಗವಾಗಿದ್ದು ಅಂದಿನ ಅನುಭವ ಮಂಟಪದಲ್ಲಿ ಎಂಬುದು ಹೆಮ್ಮೆಯ ಸಂಗತಿಯಾಗಿದೆ.
ಅವರೆಲ್ಲ ತಮ್ಮ ಕಾಯಕಗಳ ಹೆಸರುಗಳನ್ನು ಅಭಿಮಾನದಿಂದ ಉಳಿಸಿಕೊಂಡರು. ಆದರೆ ಆ ಕಾಯಕಗಳ ಒಳಗೆ ಇದ್ದ ಜಾತಿವಿಷವನ್ನು ಹೊರಹಾಕಿದರು. ಹೀಗೆ ಶರಣರಲ್ಲಿ ಮಡಿವಾಳ, ಕುಂಬಾರ, ಹಡಪದ, ಹೂಗಾರ,ಸಮಗಾರ, ಮಾದಾರ, ಮೇದಾರ, ಡೋಹರ, ಅಂಬಿಗ ಇತ್ಯಾದಿ ವೃತ್ತಿ ಪದಗಳು ಜಾತಿ ಸೂತಕವನ್ನು ಕಳೆದುಕೊಂಡು ಕಾಯಕ ಸೂಚಕಗಳಾಗಿ ಇಂದಿಗೂ ಉಳಿದಿವೆ.
ಬಸವಾದಿ ಶರಣರ ವಚನಗಳು ಮತ್ತು ತತ್ವಗಳು ಕೂಡ ಕಾಯಕದ ಉತ್ಪತ್ತಿಯಾಗಿವೆ ಎಂಬುದನ್ನು ಮರೆಯಬಾರದು.ಅನೇಕ ವಚನಕಾರರು ತಮ್ಮ ಕಾಯಕಗಳ ಅನುಭದ ಮೂಲಕವೇ ಅನುಭಾವಿಯಾಗಿದ್ದಾರೆ. ಅವರ ವಚನಗಳಲ್ಲಿನ ಪ್ರತಿಮೆ, ಪ್ರತೀಕ ಮತ್ತು ಸಂಕೇತಗಳು ಅವರವರ ಕಾಯಕಗಳ ಅನುಭವದ ಮೂಲಕವೇ ಸೃಷ್ಟಿಯಾಗಿವೆ. ಕಾಯಕದ ವಸ್ತುಗಳು ಹೀಗೆ ಕಾವ್ಯ ಪ್ರತಿಮೆಗಳಾಗುತ್ತಲೇ ಶಿವಶರಣರ ಮಾನವೀಯತೆಯ ಸಂದೇಶಗಳು ಸರ್ವರನ್ನು ಸ್ಪಟಿಕದಂತೆ ಸೆಳೆಯುತ್ತವೆ.
ಈ ಕುರಿತು ಶಿವಶರಣೆ ಆಯ್ದಕ್ಕಿಮಾರಯ್ಯನವರ ವಚನ ಹೀಗಿದೆ.
ಕಾಯಕದಲ್ಲಿ ನಿರುತನಾದೊಡೆ
ಗುರುದರ್ಶನವಾದಡೂ ಮರೆಯಬೇಕು
ಲಿಂಗ ಪೂಜೆಯಾದಡೂ ಮರೆಯಬೇಕು
ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು.
ಎನ್ನುವ ಈ ವಚನದಲ್ಲಿ ನಾವು ಯಾವ ಬಗೆಯ ತಲ್ಲೀನತೆಯನ್ನು ಇರಿಸಿಕೊಂಡಿರಬೇಕು ಅನ್ನುವುದನ್ನು ಹೇಳಿದ್ದಾರೆ. ಕಾಯಕದಲ್ಲಿ ಮಗ್ನರಾದಾಗ ಗುರುದರ್ಶನವನ್ನಾದರೂ ಮರೆಯಬೇಕು. ಲಿಂಗಪೂಜೆಯಾದರೂ ಮರೆಯಬೇಕು, ಜಂಗಮನು ಬಂದು ಮುಂದೆ ನಿಂತರೂ ಆತನ ಹಂಗಿಗೆ ಒಳಗಾಗದೆ ಕಾಯಕವನ್ನು ಮುಂದುವರೆಸಬೇಕು. ಏಕೆಂದರೆ ಕಾಯಕವೇ ಕೈಲಾಸ. ಆದ ಕಾರಣ ಮೇಲೆ ಹೇಳಿದ ಗುರು ಲಿಂಗ ಜಂಗಮ ಎಲ್ಲರೂ ಆ ಕಾಯಕದ ಪರಿಧಿಯ ಒಳಗೇ ಬರುತ್ತಾರೆ. ಎನ್ನುವುದು ಈ ವಚನದ ಒಳಾರ್ಥವಾಗಿದೆ.ಒಟ್ಟಿನಲ್ಲಿ ಹೇಳುವುದಾದರೆ, ಕಾಯಕದ ಸಮಯದಲ್ಲಿ ಯಾರೇ ಬರಲಿ, ಅವರನ್ನು ಮರೆತು, ಭಕ್ತಿಪೂರ್ವಕವಾಗಿ ಕಾಯಕ ಮಾಡಬೇಕು. ಯಾರ ಹಂಗಿಲ್ಲದೆ ಸತ್ಯ,ಶುದ್ಧ, ನ್ಯಾಯ, ನೀತಿ, ಧರ್ಮ, ಪ್ರಾಮಾಣಿಕತೆ, ಪ್ರಬುದ್ಧತೆ,ನಿಷ್ಕಲ್ಮಶ, ಮನಸ್ಸಿನಿಂದ ಅಷ್ಟೇ ಸ್ವಚ್ಛಂದವಾಗಿ ಕಾಯಕವನ್ನು ಅತ್ಯಂತ ನಿರ್ಮಲ ನಿಸ್ವಾರ್ಥದಿಂದ ಮಾಡಬೇಕು.ಅಂದಾಗಲೇ ಮಾತ್ರ ಕಾಯಕಜೀವಿಗಳಾಗಿ ಬದುಕಲು ಸಾಧ್ಯ ಎಂದು ತಿಳಿಸಿದ್ದಾರೆ. ಹೀಗೆ ಶರಣ ಪರಂಪರೆಯು ಕಾಯಕ ವರ್ಗಕ್ಕೆ ಕೊಟ್ಟ ಮಹತ್ವ ಅದ್ಭುತ ಮತ್ತು ಶ್ರೇಷ್ಠವಾದದ್ದು. ಶರಣರು ಪರಿಚಯಿಸಿದ ‘ಕಾಯಕ – ದಾಸೋಹ’ ತತ್ತ್ವ ಎಲ್ಲ ಕಾಲದಲ್ಲಿಯೂ ಎಲ್ಲರಿಗೂ ಆದರ್ಶಪ್ರಾಯವಾದದ್ದು.
ಕಾಯಕ ಬದುಕಿನ ಬಂಡಿ :
ನಾನು ಮುಂಜಾನೆಯಿಂದ ಸಂಜೆವರೆಗೆ ದುಡೀತೀನಿ ಗೊತ್ತಾ? ಯಾರೂ ಇಲ್ಲಿ ನನ್ನನ್ನು ಕೇಳೋರಿಲ್ಲ!’ ನಿಜ ಹೇಳಿ. ಒಂದಲ್ಲ ಒಂದು ಸಲವಾದರೂ ನೀವು ಹೀಗೆ ಪಶ್ಚಾತಾಪ ಪಟಿಲ್ಲವೇ? ಖಂಡಿತವಾಗಿಯೂ ಪಟ್ಟಿರುತ್ತೇವೆ. ಇದೇನೂ ಹೊಸದಲ್ಲ.
ಹೀಗೆ ಗೊಣಗಾಡುವ ಮೊದಲು ನಾವು ಯೋಚಿಸಬೇಕಾದ ವಿಷಯವೊಂದಿದೆ. ನಾವು ದುಡಿಮೆ ಮಾಡುವುದು ನಮ್ಮ ಉಜ್ವಲ ಭವಿಷ್ಯದ ಸಮಾಧಾನಕ್ಕಾಗಿ ಮತ್ತು ನಮ್ಮ ಹೊಟ್ಟೆಪಾಡಿಗಾಗಿ ಅಷ್ಟೇ ತಾನೆ, ಮತ್ತೇನು ಅಲ್ಲವೇ ಅಲ್ಲ, ಹೀಗಿದ ಮೇಲೆಯೂ ಮತ್ತೊಬ್ಬರು ನಾವು ಮಾಡುವ ಕೆಲಸವನ್ನು ಗಮನಿಸಬೇಕೆಂಬವುದು ಮೂರ್ಖತನದ ಮಾತು, ಮಾತಲ್ಲದೇ ಮತ್ತೇನು ಅಲ್ಲವೇ ಅಲ್ಲ.! ನಾವು ಹಿಂಗೇಕೆ ಎಂದರೆ, ನಾವು ತೋರಿಕೆಗಾಗಿ ಮಾಡುವ ಕೆಲಸ ಇದನ್ನೇ ಬಯಸುತ್ತದೆ ಎಂದರೆ ತಪ್ಪಾಗಲಾರದು. ನಿಸ್ವಾರ್ಥದಿಂದ ಮಾಡುವ ಕಾಯಕ ಏನನ್ನು ಬಯಸದೆ, ಇನ್ನೊಬ್ಬರಿಗೆ ಉಪಕಾರಿ ಆಗಲೆಂದು ಸೂಚಿಸುತ್ತದೆ.
ಕೆಲಸಕ್ಕೂ ಹಾಗೂ ಕಾಯಕಕ್ಕೆ ಇರುವ ವ್ಯತ್ಯಾಸ ಇಷ್ಟೇ. ಕೆಲಸ ನಮ್ಮ ಉದ್ಧಾರಕ್ಕಾಗಿ ಮಾತ್ರ, ಕಾಯಕ ನಮ್ಮ ಉದ್ಧಾರದ ಜೊತೆಗೆ ಅನ್ಯರ, ದಾಸೋಹದ ಸೇವೆಗಾಗಿ ಉಪಯೋಗವಾಗುತ್ತದೆ.ಹಾಗಾಗಿ ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಆತ್ಮಸ್ಥೈರ್ಯ, ಆತ್ಮಸಾಕ್ಷಿಯಾಗಿ, ಸಂತೋಷದಿಂದ ಮಾಡಿದಾಗ ಮಾತ್ರ ಆಗ ನೋಡಿ ನಿಮಗೆ ಕೆಲಸ ಮಾಡುತ್ತಿರುವಂತೆಯೇ ಅನ್ನಿಸುವುದಿಲ್ಲ. ಅದರಲ್ಲಿ ಒಂದು ಬಗೆಯ ಆತ್ಮತೃಪ್ತಿಯನ್ನು ದೊರೆಯುತ್ತದೆ. ಎನ್ನುತ್ತಾರೆ ಬಸವಾದಿ ಪ್ರಮಥರು. ನಾವು ಮಾಡುವ ಕೆಲಸ ನಮಗೆ ಅಪ್ಯಾಯಮಾನವಾಗಬೇಕು. ಅದನ್ನು ಮಾಡುವ ಅವಕಾಶ ಸಿಕ್ಕಿದೆಯೆಂದು ಸಂತಸಪಡಬೇಕು. ಆಗ ಮಾತ್ರ ನಮಗೆ ತೃಪ್ತಿ ದೊರಕಲು ಸಾಧ್ಯ. ಇದಕ್ಕೆ ‘ಕಾಯಕ ಸೇವೆ’ವೆಂಬ ಅಷ್ಟೇ ಸಿಹಿಯಾದ ಪದವೂ ಇದೆ. ಕಾಯಕ ನಡೆಸುವುದು ಕೇವಲ ಹಣ ಗಳಿಕೆಯಷ್ಟೇ ಅಲ್ಲ, ಅದು ನಮ್ಮ ಬದುಕಿನ ದಾರಿದೀಪದ ಬಹುಮುಖ್ಯ ಭಾಗವೂ ಆಗಿದೆ ಶರಣ ಬಂಧುಗಳೇ.
ಸತ್ಯಶುದ್ಧ ಕಾಯಕ :
ಕಾಯಕ ಒಂದು ಅದ್ಭುತ ಪ್ರಕ್ರಿಯೆ. ನಮ್ಮ ನಮ್ಮ ಕೆಲಸವನ್ನು ನಾವು ಕಾಯಾ, ವಾಚಾ, ಮನಸಾರೆ ಮಾಡಬೇಕು. ನಮ್ಮ ದೇಹದ ಪ್ರತಿ ಕಣವನ್ನೂ ನಾವು ಮಾಡುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಉದಾಹರಣೆಗೆ, ಒಂದೊಳ್ಳೆ ಸಿಹಿ ತಿನಿಸನ್ನು ತಿನ್ನುವಾಗ ನಮ್ಮ ಇಡಿಯ ಅಸ್ತಿತ್ವವೇ ಅದರ ಆಸ್ವಾದನೆಯಲ್ಲಿ ತೊಡಗಿಕೊಳ್ಳುವಂತೆ, ನಮ್ಮ ಕೆಲಸದಲ್ಲೂ ತೊಡಗಿಸಿಕೊಳ್ಳಬೇಕು. ಅಂದಾಗಲೇ ಮಾತ್ರ ಸಹಜವಾಗಿ ನಮ್ಮ ಕೆಲಸದ ಮೇಲೆ ನಮಗೆ ಪ್ರೀತಿ, ಶ್ರದ್ಧೆ ಮೂಡುವುದು. ಇಲ್ಲವಾದಲ್ಲಿ ಅಸಾಧ್ಯ ಎಂಬುದನ್ನು ಮರೆಯಬೇಡಿ. (ಹಾ ಒಂದು ಮಾತು ಈ ಸಂದರ್ಭದಲ್ಲಿ ಹೇಳಲೇಬೇಕು ಕಾಯಕ ಮಾಡದವನಿಗೆ ಹಸಿವು, ರುಚಿ, ವಿಶ್ರಾಂತಿ ಮತ್ತು ನಿದ್ರೆಯ ಮಹತ್ವ ಗೊತ್ತಾಗುವುದಿಲ್ಲ.
ಅವನಲ್ಲಿ ಯಾವಾಗಲೂ ಚಂಚಲತೆ ಉಂಟಾಗುತ್ತದೆ.ಅಲ್ಲದೇ ಅಶಾಂತಿ ಹೆಚ್ಚಿಸಿ, ಮಾನಸಿಕವಾಗಿ, ದೈಹಿಕವಾಗಿ ಬಲಹೀನತೆಗೆ ಕಾರಣವಾಗುತ್ತದೆ. ಜೀವನದಲ್ಲಿ ಜಿಗುಪ್ಸೆ ಬರುವ ಹಾಗೆ ಮಾಡುತ್ತದೆ.ಕೊನೆಗೆ ಸಾವಿನ ದವಡೆಗೆ ತಲುಪಿಸುತ್ತದೆ.)
ಇನ್ನು ನಮ್ಮಲ್ಲಿ ಬಹಳಷ್ಟು ಜನ ನಾವು ಮಾಡುವ ಕೆಲಸವನ್ನು ಅನಿವಾರ್ಯ ಕರ್ಮ ಎಂದು ಭಾವಿಸುತ್ತೇವೆ. ಜೀವನ ಸಾಗಿಸಬೇಕಲ್ಲ ಎಂಬ ಜಿಜ್ಞಾಸೆಯಲ್ಲಿ ಬೇರೆ ದಾರಿ ಕಾಣದೇ ಇದನ್ನು ಮಾಡ್ತಿದ್ದೀವಿ ಎಂದು ಹೇಳುವವರೇ ಬಹಳಷ್ಟು ಜನರು. ಈ ಅವರ ನಿರುತ್ಸಾಹದಲ್ಲಿಯೇ ಅದರ ಉತ್ತರವೂ ಇದೆ ಎನ್ನುವುದನ್ನು ನಾವು ಗಮನಿಸಬೇಕು.
ಇಷ್ಟಕ್ಕೂ ನಾವು ಕೆಲಸ ಮಾಡುವುದು ನಮ್ಮದೇ ಸವಲತ್ತುಗಳಿಗಾಗಿ. ಹೀಗಿರುವಾಗ ಇನ್ಯಾರೋ ನಮ್ಮ ಕೆಲಸವನ್ನು ಗುರುತಿಸಬೇಕು, ಹೊಗಳಬೇಕು ಎಂದು ಬಯಸುವುದೆಷ್ಟು ಸರಿ? ನಮ್ಮ ಸಂತೋಷದ ಸಂತೃತ್ತಿಗಯ, ಜೀವನ ನಡೆಸಲಿಕ್ಕೆ ಮಾತ್ರ ನಾವು ದುಡಿಯುತ್ತೇವೆ. ಅಷ್ಟೇ ಅಲ್ಲವಾ.ಅಂದಹಾಗೆ ಶರಣರು ಹೇಳುವ ಪ್ರಕಾರ ಸೇವೆ ಮಾಡುವುದಷ್ಟೆ ನಿನ್ನ ಕೆಲಸ, ಅದರ ಫಲಾಫಲಗಳ ಚಿಂತೆ ಬಿಡು. ಎನ್ನುವ ಮಾತು ನಾವೆಲ್ಲರೂ ಒಮ್ಮೆ ನೆನಪಿಸಿಕೊಳ್ಳಬೇಕು. ಇಲ್ಲಿ ಸಂಬಳ ಅಥವಾ ಗಳಿಕೆ ಹಣವೂ ಕೆಲಸದ ಒಂದು ಭಾಗವೇ ಹೊರತು ಅದು ಫಲದ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಜನ ಮೆಚ್ಚುಗೆ, ತಿರಸ್ಕಾರಗಳು ಫಲಾಫಲದ ವ್ಯಾಪ್ತಿಗೆ ಸೇರುವಂಥವು. ನಾವು ಕೆಲಸ ಮಾಡುವುದರತ್ತ ಮಾತ್ರ ಗಮನವಿಟ್ಟು, ಉಳಿದೆಲ್ಲ ಸಂಗತಿಗಳ ಬಗ್ಗೆ ನಿರ್ಲಿಪ್ತತೆಯನ್ನು ತಾಳಬೇಕು. ಕೆಲಸ ಮಾಡುವುದರ ಮೂಲಕ ನಮ್ಮ ಜೀವನ ನಿರ್ವಹಣೆಯ ಉದ್ದೇಶವಂತೂ ನೆರವೇರುತ್ತಿದೆ. ಉಳಿದೆಲ್ಲವೂ ನಮ್ಮ ಯೋಗಾಯೋಗಗಳಿಗೆ ತಕ್ಕ ಹಾಗೆ ತನ್ನಿಂತಾನೆ ಒದಗಿಬರುತ್ತವೆ. ಇದನ್ನು ಮನದಟ್ಟು ಮಾಡಿಕೊಂಡರೆ ಅಸಮಾಧಾನದಿಂದ ದುಃಖಕ್ಕೀಡಾಗುವುದು ತಪ್ಪುತ್ತದೆ.ಆದಕಾರಣ
ಕಾಯಕ ಜೀವಿಯ ಹಸಿವು ಎಲ್ಲ ಆಹಾರ ಪದಾರ್ಥಗಳನ್ನು ಪ್ರಸಾದವಾಗಿಸುತ್ತದೆ. ರುಚಿಕರವಾಗಿಸುತ್ತದೆ. ಅದಕ್ಕಾಗಿಯೇ ದುಡಿಯುತ್ತಿರುವವರಿಗೆ ವಿಶ್ರಾಂತಿ ಮತ್ತು ನಿದ್ರೆಯ ಸುಖ ಸಹಜವಾಗಿಯೇ ಸಿಗುತ್ತದೆ. ಸತ್ಯಶುದ್ಧ ಕಾಯಕದಿಂದ ಮನಸ್ಸು ಪವಿತ್ರವಾಗಿರುತ್ತದೆ. ಹಾಗಾಗಿಯೇ ಕಾಯಕಕ್ಕೆ ನಮ್ಮ ಶರಣ ಪರಂಪರೆ ಕೊಟ್ಟ ಮಹತ್ವ ಅದ್ವಿತೀಯವಾದದ್ದು. ಕಾಯಕವೇ ಕೈಲಾಸ ಎಂಬ ಯುಗಘೋಷಣೆಯನ್ನು ನೀಡಿ, ಜಾಗತಿಕ ಮಟ್ಟದಲ್ಲಿ ಪ್ರೇರಣದಾಯಕರಾಗಿದ್ದಾರೆ
ಜೀವನ ಸ್ವಾರ್ಥಕತೆ :
ಜೀವನಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಈ ಕೆಲಸ ನಮ್ಮ ಬದುಕನ್ನು ಕಟ್ಟಿಕೊಡುತ್ತಿದೆ. ನಮ್ಮ ಬದುಕನ್ನು ಆರೋಗ್ಯಕರವಾಗಿ, ಸುಂದರಗೊಳಿಸಿದೆ. ಸ್ವಾವಲಂಬಿಗಳನ್ನಾಗಿ ಮಾಡಿದೆ. ಇಂತಹಾ ದುಡಿಮೆಯ ಅವಕಾಶವನ್ನು ಪ್ರೀತಿಸಲು ನಮಗೆ ಮತ್ತೇನು ಬೇಕೋ, ಖಂಡಿತಾ ಬೇಡವೇ ಬೇಡ, ನಿಸ್ವಾರ್ಥದಿಂದ ಕೆಲಸ ಮಾಡಿಕೊಂಡು ಸುಖಿಗಳಾಗಬೇಕು. ಯಾರ ಹಂಗಿಲ್ಲದೆ ಜೀವನವನ್ನು ಕಳೆದು ಇನ್ನೊಬ್ಬರಿಗೆ ಉಪಕಾರಿಯಾಗಬೇಕು.ಅಂದಾಗಲೇ ಮಾನವನಾಗಿ ಹುಟ್ಟಿದಕ್ಕೂ ಸ್ವಾರ್ಥಕತೆ ಕಾಣಲಿದೆ.
ಗೌರವ ಮಾತು:
ಕಾಯಕವು ನಮ್ಮ ದೈಹಿಕ ಮತ್ತು ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುವುದು. ನಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡುವುದು. ಮಾನಸಿಕ ಒತ್ತಡಗಳಿಂದ ರಕ್ಷಿಸುವುದು. ಪರಾವಲಂಬಿಗಳಾಗದಂತೆ ನೋಡಿಕೊಳ್ಳುವುದು. ಕೊನೆಗೆ ನಮ್ಮನ್ನು ಸ್ವತಂತ್ರಧೀರರನ್ನಾಗಿ ಮಾಡುತ್ತದೆ ಎನ್ನುವುದು ಎಲ್ಲರೂ ಮನಗಂಡು ಸಾಗಬೇಕಾಗಿದೆ.
ಲೇಖಕರು – ಸಂಗಮೇಶ ಎನ್ ಜವಾದಿ.
ಸಾಹಿತಿ,ಪತ್ರಕರ್ತರು, ಸಾಮಾಜಿಕ ಸೇವಕರು