ಬಳ್ಳಾರಿ/ಸಿರುಗುಪ್ಪ, ಜ.09: ಸಿರುಗುಪ್ಪ ತಾಲ್ಲೂಕಿನ ದರೂರು ಗ್ರಾಮದ ಶ್ರೀ ವೀರಭದ್ರೇಶ್ವರ ಪುಣ್ಯ ಕ್ಷೇತ್ರಕ್ಕೆ ಚಿಕ್ಕಬಳ್ಳಾಪುರದಿಂದ ₹8,00,000 ಮೌಲ್ಯದ ಶಿಲಾ ಬಂಡೆಗಳು ಎರಡು ಲಾರಿಗಳ ಮೂಲಕ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಆಗಮಿಸಿವೆ.
ಈ ಸಂದರ್ಭದಲ್ಲಿ ಪುಣ್ಯ ಕ್ಷೇತ್ರದ ಪ್ರಧಾನ ಆರ್ಚಕರು ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರು ಶಿಲಾ ಬಂಡೆಗಳಿಗೆ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ, ನಂತರ ಪುಣ್ಯ ಕ್ಷೇತ್ರದ ಆವರಣದಲ್ಲಿ ಬಂಡೆಗಳನ್ನು ಇಳಿಸಲಾಯಿತು.
ಈಗಾಗಲೇ ಶ್ರೀ ವೀರಭದ್ರೇಶ್ವರ ಪುಣ್ಯ ಕ್ಷೇತ್ರದಲ್ಲಿ ಸುಮಾರು ₹2 ಕೋಟಿ 50 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನೂ ₹4 ಕೋಟಿ ಮೌಲ್ಯದ ಕಾಮಗಾರಿಗಳು ಮುಂದುವರೆಯಬೇಕಾಗಿವೆ ಎಂದು ವ್ಯವಸ್ಥಾಪನ ಸಮಿತಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಜೊತೆಗೆ ಆಂಧ್ರಪ್ರದೇಶದ ಕರ್ನೂಲ್ ಹಾಗೂ ಅನಂತಪುರ ಜಿಲ್ಲೆಗಳಲ್ಲಿರುವ ಭಕ್ತಾಧಿಗಳು ಪುಣ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಉದಾರವಾಗಿ ದೇಣಿಗೆ ನೀಡುವಂತೆ ಪುಣ್ಯ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಮನವಿ ಮಾಡಿದೆ.


