ಯಾದಗಿರಿ, ಸೆಪ್ಟೆಂಬರ್ 23: ಪಿಎಸ್ಐ ಪರಶುರಾಮ ಸಾವಿಗೆ ಕಾರಣರಾದ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಹಾಗೂ ಪುತ್ರ ಪಂಪನಗೌಡ ಬಂಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ರ ಬರೆದಿದ್ದಾರೆ. ಅಲ್ಲದೇ, ಪಿಎಸ್ಐ ಪರಶುರಾಮ ಅವರ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದರು. ಆದರೆ ಇನ್ನೂವರೆಗೂ ಪರಿಹಾರ ನೀಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮೃತ ಪಿಎಸ್ಐ ಪರಶುರಾಮ್ ಅವರ ಸ್ವಗ್ರಾಮಕ್ಕೆ ಆಗಸ್ಟ್ 08 ರಂದು ಗೃಹ ಸಚಿವರು ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಹಾಗೂ ಅವರ ಪತ್ನಿ ಶ್ವೇತಾ ಅವರಿಗೆ ಸೂಕ್ತ ಸರ್ಕಾರಿ ಕೆಲಸ ನೀಡುವುದಾಗಿ ಆಶ್ವಾಸನೆ ನೀಡಿರುವುದು ಗಮನಿಸಿದ್ದೇನೆ. ಆದರೆ ಆಶ್ವಾಸನೆಯನ್ನು ನೀಡಿ ಸುಮಾರು 45 ದಿನಗಳು ಕಳೆದರೂ ಕೂಡ ಅವರಿಗೆ ಯಾವುದೇ ರೀತಿಯ ಪರಿಹಾರ ನೀಡಿದೇ ಇರುವುದು ಮತ್ತು ಪರಿಹಾರ ಪ್ರಕ್ರಿಯೆಯನ್ನು ಪ್ರಾರಂಭ ಮಾಡದೇ ಇರುವುದೇ ಖೇಧಕರ ವಿಷಯವಾಗಿದೆ.
ಮೃತ ಪಿಎಸ್ಐ ಪರಶುರಾಮ್ ಅವರ ಸಾವಿಗೆ ಕಾರಣರಾದ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರ ಪಂಪನಗೌಡ ಇವರುಗಳ ವಿರುದ್ಧ ಜಾತಿ ನಿಂದನೆ (ಭಾರತೀಯ ನೀತಿ ಸಂಹಿತೆ 2023 (ಯು/ಎಸ್-352, 108, 3(5)); ಅಟ್ರಾಸಿಟಿ ಕಾಯ್ದೆ, 1989 (ಯು/ಎಸ್- 3(2(ವಿ), 3(1)(ಆರ್(ಎಸ್)) ಅಡಿಯಲ್ಲಿ ದೂರು ದಾಖಲಾದರೂ ಸಹ ಇದುವರೆಗೂ ಅವರ ವಿಚಾರಣೆ ನಡೆದಿಲ್ಲ ಹಾಗೂ ಅವರನ್ನು ಬಂಧಿಸಿ ವಿಚಾರಣೆಯನ್ನು ನಡೆಸುವ ಕಾರ್ಯವು ಆಗಿಲ್ಲ.