ನವದೆಹಲಿ : ಅಗ್ನಿಪಥ್ ಯೋಜನೆ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ ಬಳಿಕ, ಅಗ್ನಿಪಥ್ ಯೋಜನೆಯಿಂದ ಸೇನೆಗೆ ಯಾವುದೇ ಪ್ರಯೋಜನವಿಲ್ಲ ಅನೇಕ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ.
ನಾಲ್ಕು ವರ್ಷಗಳ ಸೇವೆಯ ನಂತರ ನಿವೃತ್ತರಾದ ಬಳಿಕ ಅಗ್ನಿವೀರರ ಭವಿಷ್ಯವೇನು ಎಂಬುದನ್ನು ಸರ್ಕಾರ ತಿಳಿಸಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಸುಖ್ಜಿಂದರ್ ಸಿಂಗ್ ರಾಂಧವ ಹೇಳಿದರು. “ನಾವು ಗೊಂದಲ ಮೂಡಿಸುತ್ತಿದ್ದೇವೆ ಎಂದು ಪ್ರಧಾನಿ ಹೇಳುತ್ತಿದ್ದಾರೆ. 30 ವರ್ಷಗಳ ನಂತರ ಏನಾಗಬಹುದು ಎಂಬುದರ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಆದರೆ, ನಾಲ್ಕು ವರ್ಷಗಳ ನಂತರ ಅಗ್ನಿವೀರರ ಭವಿಷ್ಯ ಏನಾಗುತ್ತದೆ ಎಂಬುದರ ಬಗ್ಗೆ ಅವರು ಮೊದಲು ಮಾತನಾಡಲಿ” ಎಂದು ರಾಂಧವ ಹೇಳಿದರು.
ಕಾರ್ಗಿಲ್ ಯುದ್ಧದ ಸೈನಿಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಅಗ್ನಿಪಥ್ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಕಾರ್ತಿ ಚಿದಂಬರಂ ಪ್ರಧಾನಿಯನ್ನು ಟೀಕಿಸಿದರು.