ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು (ಶುಕ್ರವಾರ) 936 ಕಿಮೀ ಉದ್ದದ 8 ಪ್ರಮುಖ ರಾಷ್ಟ್ರೀಯ ಹೈಸ್ಪೀಡ್ ರಸ್ತೆ ಕಾರಿಡಾರ್ ಅನುಮೋದನೆ ನೀಡಿದೆ. ಇದಕ್ಕಾಗಿ ಒಟ್ಟು 50,655 ಕೋಟಿ ರೂ. ಮೀಸಲಿಡಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಮತ್ತು ಭವಿಷ್ಯದ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಯೋಜನೆಗಳನ್ನು ಅನುಮೋದಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
“ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸಲು, ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ದೇಶಾದ್ಯಂತ ಸಂಪರ್ಕವನ್ನು ಹೆಚ್ಚಿಸಲು ಒಟ್ಟು 50,000 ಕೋಟಿಗೂ ಹೆಚ್ಚು ವೆಚ್ಚದಲ್ಲಿ 936 ಕಿಮೀ ಉದ್ದದ 8 ಪ್ರಮುಖ ರಾಷ್ಟ್ರೀಯ ಹೈಸ್ಪೀಡ್ ರೋಡ್ ಕಾರಿಡಾರ್ ಯೋಜನೆಗಳಿಗೆ ಕ್ಯಾಬಿನೆಟ್ ಇಂದು ಅನುಮೋದನೆ ನೀಡಿದೆ” ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಈ 8 ಯೋಜನೆಗಳ ಅನುಷ್ಠಾನದಿಂದ ಲಕ್ಷಾಂತರ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಸಚಿವರು ಹೇಳಿದ್ದಾರೆ. ಪ್ರಮುಖ ಯೋಜನೆಗಳ ಪೈಕಿ, 68 ಕಿಮೀ ನಾಲ್ಕು ಪಥದ ಅಯೋಧ್ಯೆ ರಿಂಗ್ ರಸ್ತೆಯನ್ನು 3,935 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಸರ್ಕಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಈ ಯೋಜನೆಯು ನಗರ ಮತ್ತು ಹತ್ತಿರದ ಪ್ರದೇಶಗಳ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ರಾಮ ಮಂದಿರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ತ್ವರಿತ ಸಂಚಾರವನ್ನು ಸಕ್ರಿಯಗೊಳಿಸುತ್ತದೆ.
ಪಶ್ಚಿಮ ಬಂಗಾಳದಲ್ಲಿ ಖರಗ್‌ಪುರ-ಮೋರೆಗ್ರಾಮ್ ನಡುವೆ 231 ಕಿಮೀ ಉದ್ದದ 4-ಲೇನ್ ಹೈಸ್ಪೀಡ್ ಕಾರಿಡಾರ್ ಅನ್ನು ಒಟ್ಟು 10,247 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಅಸ್ತಿತ್ವದಲ್ಲಿರುವ 2-ಲೇನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಹೊರೆಯನ್ನು ಕಡಿಮೆ ಮಾಡಲು ಮತ್ತು ಖರಗ್‌ಪುರ ಮತ್ತು ಮೋರೆಗ್ರಾಮ್ ನಡುವೆ ಸಾಮರ್ಥ್ಯವನ್ನು ಸುಮಾರು 5 ಪಟ್ಟು ಹೆಚ್ಚಿಸಲು ಈ ಹೆದ್ದಾರಿ ಸಹಾಯ ಮಾಡುತ್ತದೆ.
“ಮೂಲಸೌಕರ್ಯ ಅಭಿವೃದ್ಧಿಯು ದೇಶದ ಆರ್ಥಿಕ ಸಮೃದ್ಧಿಗೆ ಅಡಿಪಾಯವಾಗಿದೆ ಮತ್ತು ಅದರ ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸಲು ನಿರ್ಣಾಯಕವಾಗಿದೆ. ಖಾಸಗಿ ಹೂಡಿಕೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು ಬಂಡವಾಳ ಹೂಡಿಕೆಯು 6 ಪಟ್ಟು ಹೆಚ್ಚಾಗಿದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 2013-14ರಲ್ಲಿ 50,000 ಕೋಟಿ ರೂ. ಇದ್ದುದು 2023-24ರಲ್ಲಿ 3.1 ಲಕ್ಷ ಕೋಟಿ ರೂ. ಆಗಿದೆ.