ಬೆಂಗಳೂರು, ಆ.31: ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಬಹುತೇಕ ಕಳ್ಳಬೇಟಿ ನಿಯಂತ್ರಣ ಮಾಡಿರುವ ಬಗ್ಗೆ ಜರ್ಮನಿಯ ಸಂಸತ್ ಸದಸ್ಯ ಜೇನ್ಸ್ ಗೀಯರ್ ನೇತೃತ್ವದ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ.
ವಿಕಾಸಸೌಧದ ಸಚಿವರ ಕೊಠಡಿಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿದ ನಿಯೋಗ ಒಂದು ಗಂಟೆಗೂ ಹೆಚ್ಚುಕಾಲ ಜಾಗತಿಕ ತಾಪಮಾನ ಏರಿಕೆ, ಹವಾಮಾನ ವೈಪರೀತ್ಯ ಮತ್ತು ನವೀಕರಿಸಬಹುದಾದ ಇಂಧನ, ಸುಸ್ಥಿರ ಅಭಿವೃದ್ಧಿಯ ಬಗ್ಗೆ ಚರ್ಚಿಸಿತು.
ನಿಯೋಗವನ್ನು ಸ್ವಾಗತಿಸಿದ ಈಶ್ವರ ಖಂಡ್ರೆ, ಕರ್ನಾಟಕದಲ್ಲಿ ಅರಣ್ಯ, ವನ್ಯಜೀವಿ ಸಂರಕ್ಷಣೆ ಹಾಗೂ ಜೀವವೈವಿಧ್ಯದ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಕುರಿತಂತೆ ವಿವರಿಸಿದರು. ಕಳ್ಳಬೇಟೆಯನ್ನು ತಡೆಯಲು ಕರ್ನಾಟಕ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿದ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿತು.
ಪರಿಸರ ಸಂರಕ್ಷಣೆ, ಇಂಗಾಲದ ಪ್ರಮಾಣವನ್ನು (ಶೂನ್ಯಕ್ಕೆ) ತಗ್ಗಿಸುವಿಕೆ, ಸಸ್ಯಸಂಕುಲ, ಪ್ರಾಣಿ ಸಂಕುಲ ಹಾಗೂ ಕೀಟ ಸಂಕುಲ ಮತ್ತು ಪಕ್ಷಿ ಸಂಕುಲದ ರಕ್ಷಣೆ, ಕಾರ್ಬನ್ ಕ್ರೆಡಿಟ್ ರೇಟಿಂಗ್ ನೀತಿ ಮೊದಲಾದ ವಿಷಯಗಳ ಬಗ್ಗೆ ನಿಯೋಗ ವಿಸ್ತೃತ ಚರ್ಚೆ ನಡೆಸಿತು.
ಭಾರತಕ್ಕೆ ಭೇಟಿ ನೀಡಿರುವ ಜರ್ಮನಿಯ ಸಂಸತ್ ಸದಸ್ಯ ಜೇನ್ಸ್ ಗೀಯರ್ ಮತ್ತು ಬುಂಡೆಸ್ಟಾಗ್ ನ ಸದಸ್ಯ ಬೆಂಗ್ಟ್ ಬರ್ಗ್ಟ್ ಅವರನ್ನು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸತ್ಕರಿಸಿದರು.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬ್ರಿಜೇಶ್ ದೀಕ್ಷಿತ್, ಸುಭಾಷ್ ಮಾಲ್ಕಡೆ, ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯ ಮೋಹನ ರಾಜ್ ಮತ್ತಿತರರು ಉಪಸ್ಥಿತರಿದ್ದರು.