ನವದೆಹಲಿ,30: ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಈ ಬಾರಿ ಜಿಎಸ್ ಟಿ ಬಾಕಿ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಜಿಎಸ್ಟಿ ಗುಪ್ತಚರ ವಿಭಾಗ ನೋಟಿಸ್ ನೀಡಿದೆ.
ಮೂಲಗಳ ಪ್ರಕಾರ ಪತಂಜಲಿ ಸಂಸ್ಥೆಯ ಸುಮಾರು 27.46 ಕೋಟಿ ರೂಪಾಯಿ ಮೌಲ್ಯದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಏಕೆ ವಸೂಲಿ ಮಾಡಿಕೊಳ್ಳಬಾರದು ಎಂಬುದಕ್ಕೆ ವಿವರಣೆ ನೀಡಬೇಕು ಎಂದು ಸೂಚಿಸಿ ಜಿಎಸ್ಟಿ ಗುಪ್ತಚರ ವಿಭಾಗ, ಪತಂಜಲಿ ಫುಡ್ಸ್ ಗೆ ಶೋಕಾಸ್ ನೋಟಿಸ್ ನೀಡಿದೆ.
ಯೋಗಗುರು ರಾಮದೇವ್ ನೇತೃತ್ವದ ಪತಂಜಲಿ ಆಯುರ್ವೇದ ಸಮೂಹಸಂಸ್ಥೆ ಪ್ರಮುಖವಾಗಿ ಖಾದ್ಯತೈಲ ವ್ಯವಹಾರ ನಡೆಸುತ್ತಿದ್ದು, ಈ ಕಂಪನಿಗೆ ಜಿಎಸ್ಟಿ ಗುಪ್ತಚರ ವಿಭಾಗದ ಚಂಡೀಗಢ ವಲಯ ಘಟಕ ನೋಟಿಸ್ ನೀಡಿದೆ ಎಂದು ಕಂಪನಿ ಏಪ್ರಿಲ್ 26ರಂದು ಸಲ್ಲಿಸಿದ ನಿಯಂತ್ರಣಾತ್ಮಕ ಸಲ್ಲಿಕೆಯಲ್ಲಿ ಸ್ಪಷ್ಟಪಡಿಸಿದೆ. ಕೇಂದ್ರೀಯ ಸರಕು ಮತ್ತು ಸೇವೆಗಳ ಕಾಯ್ದೆ-2017ರ ಸೆಕ್ಷನ್ 74 ಮತ್ತು ಸಮಗ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ-2017ರ ಸೆಕ್ಷನ್ 20 ನ್ನು ಉಲ್ಲೇಖಿಸಿ ಈ ನೋಟಿಸ್ ನೀಡಲಾಗಿದೆ.
“ಪತಂಜಲಿ ಕಂಪನಿ, ಅದರ ಅಧಿಕೃತ ಸಹಿದಾರರು, 27,46,14,343 ರೂಪಾಯಿಗಳ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಬಡ್ಡಿಸಹಿತ ಏಕೆ ವಸೂಲಿ ಮಾಡಿಕೊಳ್ಳಬಾರದು ಎಂಬ ಬಗ್ಗೆ ಕಾರಣಗಳನ್ನು ನೀಡುವಂತೆ ಮೋಟಿಸ್ನಲ್ಲಿ ಸೂಚಿಸಲಾಗಿದೆ. ಜತೆಗೆ ಏಕೆ ಇದಕ್ಕೆ ದಂಡ ವಿಧಿಸಬಾರದು ಎಂದೂ ಪ್ರಶ್ನಿಸಲಾಗಿದೆ. ಸದ್ಯಕ್ಕೆ ಪ್ರಾಧಿಕಾರ ಶೋಕಾಸ್ ನೋಟಿಸ್ ಮಾತ್ರ ನೀಡಿದ್ದು, ಪ್ರಾಧಿಕಾರದ ಮುಂದೆ ತನ್ನನ್ನು ಸಮರ್ಥಿಸಿಕೊಳ್ಳಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕಂಪನಿ ಕೈಗೊಳ್ಳಲಿದೆ ಎಂದು ಪತಂಜಲಿ ಫುಡ್ಸ್ ಪ್ರತಿಕ್ರಿಯಿಸಿದೆ.