ಪುರಿ,04 : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತ್ತೊಂದು ಹಿನ್ನಡೆಯಲ್ಲಿ, ಒಡಿಶಾದ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಪ್ರಚಾರಕ್ಕೆ ಪಕ್ಷ ಹಣ ನೀಡದ ಕಾರಣ ಹಣಕಾಸಿನ ಕೊರತೆಯಿಂದ ಪುರಿ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದಾರೆ…! ಕಾಂಗ್ರೆಸ್ ಅಭ್ಯರ್ಥಿ ತನಗೆ ಪಕ್ಷದಿಂದ ಹಣಕಾಸಿನ ಯಾವುದೇ ನೆರವು ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಸುಚರಿತಾ ಮೊಹಂತಿ ಅವರು ಶುಕ್ರವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರಿಗೆ ಪತ್ರ ಬರೆದಿದ್ದು, ಪ್ರಚಾರ ಮಾಡಲು ತನಗೆ ಹಣಕಾಸಿನ ಕೊರತೆಯಿರುವ ಕಾರಣ ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಮೊಹಾಂತಿ ಅವರು ತಮ್ಮ ಪತ್ರದಲ್ಲಿ, “ಪಕ್ಷವು ನನಗೆ ಹಣಕಾಸು ಸಹಾಯವನ್ನು ನಿರಾಕರಿಸಿದ ಕಾರಣ ಪುರಿ ಸಂಸದೀಯ ಕ್ಷೇತ್ರದಲ್ಲಿ ನಮ್ಮ ಪ್ರಚಾರಕ್ಕೆ ಭಾರಿ ಹೊಡೆತ ಬಿದ್ದಿದೆ. ಎಐಸಿಸಿ ಒಡಿಶಾ ಉಸ್ತುವಾರಿ ಡಾ ಅಜೋಯಕುಮಾರ ಜಿ ಅವರು ಹಣಕಾಸಿನ ವಿಚಾರದಲ್ಲಿ ಅದನ್ನು ನಾನೇ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ. ನಾನು ನನ್ನ ಎಲ್ಲ ಉಳಿತಾಯದ ಹಣವನ್ನು ಪ್ರಚಾರಕ್ಕಾಗಿ ಖರ್ಚು ಮಾಡಿದ್ದೇನೆ ಮತ್ತು ಇದಕ್ಕೂ ಹೆಚ್ಚಿನ ಹಣ ನೀಡಲು ನನ್ನ ಬಳಿ ಹಣ ಇಲ್ಲ ಎಂದು ಹೇಳಿದ್ದಾರೆ.
ಮೊಹಾಂತಿ ಅವರು ಲೋಕಸಭೆ ಚುನಾವಣೆಗೆ ಇನ್ನೂ ನಾಮಪತ್ರ ಸಲ್ಲಿಸಿಲ್ಲ ಮತ್ತು ಹಣಕಾಸಿನ ಕೊರತೆಯಿಂದಾಗಿ ನಾಮಪತ್ರ ಸಲ್ಲಿಸಲು ನಿರಾಕರಿಸಿದ್ದಾರೆ. ಪುರಿ ಕ್ಷೇತ್ರದಿಂದ ಬಿಜೆಡಿಯಿಂದ ಅರೂಪ್ ಪಟ್ನಾಯಕ್ ಮತ್ತು ಬಿಜೆಪಿಯ ಸಂಬಿತ್ ಪಾತ್ರಾ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.