ಸ್ಯಾನ್ ಫ್ರಾನ್ಸಿಸ್ಕೋ, ಏಪ್ರಿಲ್ 18: ಗೂಗಲ್ ಸಂಸ್ಥೆ ಮತ್ತೊಂದು ಸುತ್ತಿನ ಲೇ ಆಫ್ ನಡೆಸುತ್ತಿದೆ. ಆದರೆ, ಎಲ್ಲಾ ವಿಭಾಗಗಳಲ್ಲೂ ಕೆಲಸ ಹೋಗುತ್ತಿಲ್ಲ. ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ವಿಭಾಗದಲ್ಲಿ ಲೇ ಆಫ್ ಆಗುತ್ತಿರುವುದು ಗೊತ್ತಾಗಿದೆ.
ಟ್ರೆಷರಿ, ಬಿಸಿನೆಸ್ ಸರ್ವಿಸ್, ರೆವಿನ್ಯೂ ಕ್ಯಾಷ್ ಆಪರೇಶನ್ಸ್ ತಂಡಗಳ ಫೈನಾನ್ಸ್ ವಿಭಾಗದಲ್ಲಿ ಹೆಚ್ಚು ಮಂದಿಗೆ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಅಧಿಕ ಸಂಖ್ಯೆಯಲ್ಲಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿರುವುದು ಗೊತ್ತಾಗಿದೆ. ವೆಚ್ಚ ಕಡಿತದ ಉದ್ದೇಶದಿಂದ ಈ ಜಾಬ್ ಕಟ್ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ವರದಿಗಳ ಪ್ರಕಾರ ಕೆಲಸದಿಂದ ತೆಗೆದುಹಾಕಲಾಗುತ್ತಿರುವ ಉದ್ಯೋಗಿಗಳಿಗೆ ಗೂಗಲ್ನ ಮ್ಯಾನೇಜ್ಮೆಂಟ್ನಿಂದ ಮಾಹಿತಿ ನೀಡಲಾಗಿದೆ.
ಎಷ್ಟು ಮಂದಿಗೆ ಕೆಲಸ ಹೋಗುತ್ತಿದೆ ಎಂಬುದು ಗೊತ್ತಾಗಿಲ್ಲ. ಆದರೆ, ಇಂಟರ್ನಲ್ ರೋಲ್ಗಳಿಗೆ ಈ ಉದ್ಯೋಗಿಗಳು ಮರು ಅರ್ಜಿ ಸಲ್ಲಿಸುವ ಅವಕಾಶ ಹೊಂದಿರುತ್ತಾರೆ. ಬೆಂಗಳೂರು, ಮೆಕ್ಸಿಕೋ ಸಿಟಿ, ಡುಬ್ಲಿನ್ ಮೊದಲಾದ ನಗರಗಳಲ್ಲಿ ತನ್ನ ಗ್ರೋತ್ ಹಬ್ಗಳನ್ನು ವಿಸ್ತರಿಸುವ ಪ್ಲಾನ್ ಮಾಡಲಾಗಿದ್ದು ಅಲ್ಲಿಗೆ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಇಂಟರ್ನಲ್ ಮೇಲ್ನಲ್ಲಿ ಉದ್ಯೋಗಿಗಳಿಗೆ ಅಫರ್ ಮಾಡಲಾಗಿದೆ.
ಗೂಗಲ್ನಲ್ಲಿ ಕಳೆದ ಎರಡು ವರ್ಷದಿಂದ ಅಧಿಕ ಪ್ರಮಾಣದಲ್ಲಿ ಲೇ ಆಫ್ ಆಗಿದೆ. 2022ರಲ್ಲಿ ಶೇ. 6ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡುವ ಬಹಳ ಕಠಿಣ ನಿರ್ಧಾರವನ್ನು ಗೂಗಲ್ ಕೈಗೊಂಡಿತ್ತು. ಶೇ. 6ಎಂದರೆ ಬರೋಬ್ಬರಿ 12,000 ಗೂಗಲ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಸಿಇಒ ಸುಂದರ್ ಪಿಚೈ ಈ ದೊಡ್ಡ ಲೇ ಆಫ್ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಬ್ ಕಟ್ ಇರುವುದಾಗಿಯೂ ಸುಳಿವು ನೀಡಿದ್ದರು
ಅದರಂತೆ 2023ರ ವರ್ಷದ ದ್ವಿತೀಯಾರ್ಧದಿಂದ ಗೂಗಲ್ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಎಂಜಿನಿಯರಿಂಗ್, ಹಾರ್ಡ್ವೇರ್ ಮತ್ತು ಅಸಿಸ್ಟಂಟ್ ಟೀಮ್ಗಳು ಸೇರಿದಂತೆ ವಿವಿಧ ತಂಡಗಳಲ್ಲಿನ ನೂರಾರು ಉದ್ಯೋಗಿಗಳನ್ನು ಜನವರಿಯಲ್ಲಿ ಲೇ ಆಫ್ ಮಾಡಲಾಗಿತ್ತು.