ಬೆಂಗಳೂರು, ಡಿಸೆಂಬರ್ 1: ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ತಿಕ್ಕಾಟ ತೀವ್ರಗೊಂಡ ಬೆನ್ನಲ್ಲೇ ಶನಿವಾರ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ‘ಬ್ರೇಕ್ಫಾಸ್ಟ್ ಮೀಟಿಂಗ್’ ನಡೆದಿತ್ತು. ಆ ಬಳಿಕ ಸಿಎಂ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಗ್ಗಟ್ಟಿನ ಸಂದೇಶ ರವಾನಿಸಿ, ಏನೇ ಇದ್ದರೂ ಹೈಕಮಾಂಡ್ ಹೇಳಿದಂತೆ ನಡೆಯುತ್ತೇವೆ ಎಂದಿದ್ದರು. ಆ ಬಳಿಕ ಸಿದ್ದರಾಮಯ್ಯ ಅವರು, ಡಿಕೆಶಿ ಕೂಡ ಮನೆಗೆ ಆಹ್ವಾನಿಸಿದ್ದಾರೆ. ಹೋಗುತ್ತೇನೆ ಎಂದಿದ್ದಾರೆ. ಇದೀಗ ಅದಕ್ಕೂ ಮುಹೂರ್ತ ಫಿಕ್ಸ್ ಆಗಿದೆ. ಮಂಗಳವಾರ ಬೆಳಗ್ಗೆ 9.30ಕ್ಕೆ ಡಿಕೆ ಶಿವಕುಮಾರ್ ಅವರ ಸದಾಶಿವನಗರದ ಖಾಸಗಿ ನಿವಾಸದಲ್ಲಿ ಸಿದ್ದರಾಮಯ್ಯ ‘ಬ್ರೇಕ್ಫಾಸ್ಟ್ ಮೀಟಿಂಗ್’ಗಾಗಿ ಹಾಜರಾಗಲಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಬಿಕ್ಕಟ್ಟು ತುಸು ಮಟ್ಟಿಗೆ ಶಮನಗೊಂಡ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಖರ್ಗೆ ಕರ್ನಾಟಕದವರೇ ಆಗಿರುವುದರಿಂದ ಯಾವುದೇ ಏಕಪಕ್ಷೀಯ ಅಥವಾ ಪಕ್ಷಪಾತ ನಿರ್ಧಾರವಾಗಿ ಹೋಗದಂತೆ ನೋಡಿಕೊಳ್ಳಲು ಎಲ್ಲ ಉನ್ನತ ಮಟ್ಟದ ನಾಯಕರನ್ನು ಜತೆ ಕರೆದು ಚರ್ಚಿಸಲು ಮುಂದಾಗಿದ್ದಾರೆ.


