ಧಾರವಾಡ: ರೈತರ ಪಿತ್ರಾರ್ಜಿತ ಜಮೀನಿನಲ್ಲಿ ವಕ್ಫ ಆಸ್ತಿ ಎಂದು ನಮೂದಾಗಿರುವುದನ್ನು ವಿರೋಧಿಸಿ ಧಾರವಾಡ ತಹಶೀಲ್ದಾರ ಕಚೇರಿ ಎದುರು ಉಪ್ಪಿನ ಬೆಟಗೇರಿ ಗ್ರಾಮದ ರೈತರು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ಅಧಿಕಾರಿಗಳನ್ನು ರೈತರು ಏಕವಚನದಲ್ಲೇ ತರಾಟೆಗೆ ತೆಗೆದುಕೊಳ್ಳುವ ಮೂಲಕ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಪಿತ್ರಾರ್ಜಿತ ಆಸ್ತಿಗೆ ವಕ್ಫ ಆಸ್ತಿ ಎಂದು ಹೇಗೆ ನಮೂದಾಯಿತು? ಇದರಲ್ಲಿ ಸರ್ಕಾರ ಮತ್ತು ಅಧಿಕಾರಿಗಳ ಕೈವಾಡ ಇಲ್ಲದೇ ಈ ರೀತಿಯ ತಪ್ಪು ನಡೆಯಲು ಸಾಧ್ಯವೇ ಇಲ್ಲ. ಇದೇ ರೀತಿ ಹಿಂದೂಗಳ ಆಸ್ತಿ ವಕ್ಫ ಆಸ್ತಿ ಎಂದು ಹೇಳುತ್ತ ಹೊರಟರೆ ಆಯುಧ ಪೂಜೆಗೆ ಇಟ್ಟ ಆಯುಧಗಳನ್ನು ನಾವೂ ಹೊರಗೆ ತೆಗೆಯಬೇಕಾಗುತ್ತದೆ. ಪಹಣಿ ಪತ್ರಿಕೆಯಲ್ಲಿ ವಕ್ಫ ಆಸ್ತಿ ಎಂದು ನಮೂದು ಮಾಡುವಾಗ ರೈತರಿಗೆ ಹೇಳಿಲ್ಲ. ನೋಟಿಸ್ ಕೊಟ್ಟಿಲ್ಲ. ಹೇಳದೇ ಕೇಳದೇ ಅದನ್ನು ನಮೂದಿಸಲಾಗಿದೆ. ಹೇಗೆ ನಮೂದು ಮಾಡಿದ್ದೀರೋ ಹಾಗೇ ಅದನ್ನು ತೆಗೆದು ಹಾಕಬೇಕು. ಜಿಲ್ಲಾಧಿಕಾರಿಗಳು ಕರೆದಾಗ ನಾವ್ಯಾಕೆ ಹೋಗಬೇಕು? ಜಿಲ್ಲಾಧಿಕಾರಿಗಳೇ ರೈತರ ಬಳಿ ಬಂದು ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ರೈತರು ಎಚ್ಚರಿಕೆ ನೀಡಿದರು.
ಸ್ಥಳದಲ್ಲೇ ಧಾರವಾಡ ತಹಶೀಲ್ದಾರ ಅವರನ್ನು ರೈತರು ತೀವ್ರ ತರಾಟೆಗೆ ತೆಗೆದುಕೊಂಡರು. ವಕ್ಫ ಹೆಸರು ತೆಗೆದು ಹಾಕಲು ಅರ್ಜಿ ಕೊಟ್ಟರೂ ರೈತರನ್ನು ನೀವು ಐದಾರು ತಿಂಗಳುಗಟ್ಟಲೇ ಅಲೆದಾಡಿಸಿದ್ದೀರಿ. ಎಸಿ ಅವರು ರೈತರಿಗೆ ಮರ್ಯಾದೆ ಇಲ್ಲದಂತೆ ಮಾತನಾಡಿದ್ದಾರೆ. ಈ ರೀತಿಯ ವರ್ತನೆಯನ್ನು ರೈತರ ಮೇಲೆ ತೋರಿದರೆ ಬಾರಕೋಲಿನ ಮೂಲಕ ನಿಮಗೆ ಉತ್ತರ ಕೊಡಬೇಕಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುವ ಮೂಲಕ ಎಚ್ಚರಿಕೆ ನೀಡಿದರು. ಬರುವ ನ.5 ರಂದು ಜಿಲ್ಲಾಧಿಕಾರಿಗಳು ಈ ಬಗ್ಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ತಹಶೀಲ್ದಾರ ದೊಡ್ಡಪ್ಪ ಹೂಗಾರ ಮಾಹಿತಿ ನೀಡಿದರು.
ಸುಮಾರು 2 ಗಂಟೆಗೂ ಹೆಚ್ಚು ಕಾಲ ರೈತರು ತಹಶೀಲ್ದಾರ ಕಚೇರಿ ಎದುರು ಧರಣಿ ನಡೆಸಿದರು. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರೈತರು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರೈತರು, ತಮ್ಮ ಪಹಣಿಯಲ್ಲಿ ನಮೂದಾಗಿರುವ ವಕ್ಫ ಆಸ್ತಿ ಎಂಬ ಹೆಸರನ್ನು ಕೂಡಲೇ ತೆಗೆದು ಹಾಕಬೇಕು ಎಂದು ಎಚ್ಚರಿಕೆ ನೀಡಿದರು. ರೈತರ ಈ ಹೋರಾಟಕ್ಕೆ ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ ಹಾಗೂ ಬಿಜೆಪಿ ಮುಖಂಡರಾದ ಸವಿತಾ ಅಮರಶೆಟ್ಟಿ ಸೇರಿದಂತೆ ಅನೇಕರು ಬೆಂಬಲ ಸೂಚಿಸಿದರು.