ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಇಂದು ಚುನಾವಣಾ ಗ್ಯಾರಂಟಿಯನ್ನು ಬಿಡುಗಡೆ ಮಾಡಿತು. ಮಹಾರಾಷ್ಟ್ರ ರಾಜ್ಯದ ಮಹಿಳೆಯರಿಗೆ ತಿಂಗಳಿಗೆ 3,000 ರೂ. ಮತ್ತು ರಾಜ್ಯ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಭರವಸೆ ನೀಡಿದೆ. ಹಾಗೇ, 3 ಲಕ್ಷ ರೂ. ಕೃಷಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ. ನವೆಂಬರ್ 20ಕ್ಕೆ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಮಹಾ ವಿಕಾಸ್ ಅಘಾಡಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಮಹಾರಾಷ್ಟ್ರದಲ್ಲಿ ಕೃಷಿ ಸಮೃದ್ಧಿ ಯೋಜನೆಯಡಿಯಲ್ಲಿ 3 ಲಕ್ಷದವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಚುನಾವಣಾ ಭರವಸೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಎಂವಿಎ ಸರ್ಕಾರವು ರಾಜ್ಯದ ಪ್ರತಿ ನಿರುದ್ಯೋಗಿ ಯುವಕರಿಗೆ ಮಾಸಿಕ 4,000 ರೂಪಾಯಿಗಳನ್ನು ನೀಡಲಿದೆ ಎಂದು ಚುನಾವಣಾ ಗ್ಯಾರಂಟಿ ಬಿಡುಗಡೆಯ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ಹೇಳಿದರು.
ಕೃಷಿ ಸಮೃದ್ಧಿ ಯೋಜನೆಯಡಿ, ರೈತರು ಬೆಳೆ ಸಾಲಗಳ ನಿಯಮಿತ ಮರುಪಾವತಿಗೆ ಪ್ರೋತ್ಸಾಹಕವಾಗಿ 3 ಲಕ್ಷ ರೂ. ಮತ್ತು ರೂ 50,000 ವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಶಿವಸೇನೆ (ಯುಬಿಟಿ)-ಎನ್‌ಸಿಪಿ (ಎಸ್‌ಪಿ)-ಕಾಂಗ್ರೆಸ್ ಮೈತ್ರಿಯು ಘೋಷಿಸಿತು. ನಿರುದ್ಯೋಗಿ ಯುವಕರಿಗೆ ಮಾಸಿಕ 4,000 ರೂ. ಭತ್ಯೆ, 25 ಲಕ್ಷ ರೂ.ವರೆಗಿನ ಆರೋಗ್ಯ ವಿಮೆ ಮತ್ತು ಉಚಿತ ಔಷಧಿಗಳ ಭರವಸೆ ನೀಡಲಾಗಿದೆ.