ಅಥಣಿ; ಮನುಕುಲದ ಹಿತದೃಷ್ಟಿಯಿಂದ ಆವಿಷ್ಕಾರ ಮಾಡಿದ ಎಲ್ಲರೂ ಅಭಿಯಂತರರೇ ಆಗಿದ್ದು, ಮನುಷ್ಯ ಜೀವನದ ನಿತ್ಯ ಬಳಕೆಯ ಅವಿಭಾಜ್ಯ ಅಂಗವೇ ಆಗಿರುವ ಇಂಜಿನಿಯರಿಂಗ್ ಕ್ಷೇತ್ರ ಹಾಗೂ ಅಭಿಯಂತರರ ಶ್ರಮ ಸ್ಮರಣೀಯವಾಗಿದೆ ಎಂದು ಅಥಣಿಯ ಖ್ಯಾತ ಅಭಿಯಂತರರಾದ ರಾಜಶೇಖರ ಎನ್. ಟೋಪಗಿ ಅಭಿಪ್ರಾಯಪಟ್ಟರು.
ಅವರು ನಗರದ ಐನಾಪುರ ರಸ್ತೆಯಲ್ಲಿರುವ ಸ್ಥಳೀಯ ಅನ್ನಪೂರ್ಣಾ ಸಮೂಹದ ಶಿಕ್ಷಣ ಸಂಸ್ಥೆಗಳ ಬಿಸಿಎ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಅಭಿಯಂತರರ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಡಾ. ರವಿ ಪಾಂಗಿ ಮಾತನಾಡಿ, ಇಂದಿನ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡುವ ಬದಲು ವಿವಿಧ ಕೌಶಲ್ಯಗಳ ಕಲಿಕೆಗೆ ಸಮಯದ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು. ಕೆಲಸಕ್ಕಾಗಿ ಅಲೆದಾಡುವುದಕ್ಕಿಂತ ಇನ್ನೊಬ್ಬರಿಗೆ ಕೆಲಸವನ್ನು ಕೊಡುವ ಮಟ್ಟಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವುದೇ ಎಜಿಆಯ್ ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದರು.
ಸರ್. ಎಂ. ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ರಾಷ್ಟ್ರೀಯ ಅಭಿಯಂತರರ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನಾಧಾರಿತ ಮಾದರಿ ಪ್ರಾತ್ಯಕ್ಷಿಕೆಗಳ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಪಲ್ಲವಿ ಠಕ್ಕನವರ, ನಿಧಾ ಕಲ್ಮಡಿ ತಂಡ ಪ್ರಥಮ, ಗೌರಿ ಪಿಸೆ, ಸಾಕ್ಷಿ ಮುಲಿಕ್ ತಂಡ ದ್ವಿತೀಯ ಸಾದಿಯಾ ಮುಲ್ಲಾ, ಶ್ವೇತಾ ಸಾವಳಗಿ ತಂಡ ತೃತೀಯ ಕ್ರಮವಾಗಿ ಸ್ಥಾನಗಳನ್ನು ಹಂಚಿಕೊಂಡರು.
ಹಿರಿಯ ಅಭಿಯಂತರ, ಸಂಸ್ಥೆಯ ಟ್ರಸ್ಟಿಗಳಾದ ಮಲ್ಲಿಕಾರ್ಜುನ ಪಾಂಗಿಯವರು ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಈರಗೌಡಾ ಪಾಟೀಲ, ಎಜಿಆಯ್ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ದೀಪಾ ಆರ್. ಪಾಂಗಿ, ಬಿಎಸ್ಸಿ ನರ್ಸಿಂಗ್ ಪ್ರಾಚಾರ್ಯ ಮಲ್ಲಪ್ಪ ಶಿವಾಪುರ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾವೇರಿ ಪಾಟೀಲ ಮತ್ತು ತಬಸುಮ್ ಕರೋಲಿ ಪ್ರಾರ್ಥಿಸಿದರು. ಸೃಷ್ಟಿ ಪಾಟೀಲ ಸ್ವಾಗತಿಸಿದರು. ಗಾಯತ್ರಿ ಪತ್ತಾರ ಪರಿಚಯಿಸಿದರು. ಗಿರಿಜಾ ಅಳ್ಳಿಮಟ್ಟಿ ನಿರೂಪಿಸಿದರು. ಸ್ಪಂದನಾ ಸಾಳವೆ ವಂದಿಸಿದರು. ಪ್ರೊ. ಅಜಯ ಅಕ್ಕಿವಾಟೆ ನಿರ್ದೇಶಿಸಿದರು.