ಕೇಜ್ರಿವಾಲ್ ಮಾದರಿಯಾಗಿರಬೇಕಿತ್ತು: ಅಣ್ಣಾ ಹಜಾರೆ – ಅಣ್ಣಾ ಹಜಾರೆ

Ravi Talawar
ಕೇಜ್ರಿವಾಲ್ ಮಾದರಿಯಾಗಿರಬೇಕಿತ್ತು: ಅಣ್ಣಾ ಹಜಾರೆ – ಅಣ್ಣಾ ಹಜಾರೆ
WhatsApp Group Join Now
Telegram Group Join Now

ಮುಂಬೈ, ಮಹಾರಾಷ್ಟ್ರ: ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಒಳ್ಳೆಯ ಕೆಲಸಗಾರ. ಆದರೆ, ಅಬಕಾರಿ ನೀತಿಯಿಂದ ದೆಹಲಿ ಜನರ ವಿರೋಧ ಕಟ್ಟಿಕೊಳ್ಳಬೇಕಾಯಿತು. ಇದು ಅವರ ಸೋಲಿಗೂ ಕಾರಣವಾಯಿತು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದರು.

ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ರೇಖಾ ಗುಪ್ತ ಅವರಿಗೆ ಶುಭಾಶಯ ತಿಳಿಸಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಜ್ರಿವಾಲ್ ಉತ್ತಮ ಕೆಲಸಗಾರನಾದರೂ, ಅವರ ಕೆಲವು ತಪ್ಪು ನಿರ್ಧಾರಗಳಿಗೆ ಜನ ಅವರಿಗೆ ತಕ್ಕ ಪಾಠ ಕಲಿಸಬೇಕಾಯಿತು ಎಂದಿದ್ದಾರೆ.

ಜನವಿರೋಧಿ ನಿರ್ಧಾರಗಳಿಂದ ದಾರಿ ತಪ್ಪಿದರು: ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ಸಮಾಜದ ಮುಂದೆ ಒಂದು ಮಾದರಿಯಾಗಿರಬೇಕಿತ್ತು. ಆದರೆ, ಕೆಲವು ಜನ ವಿರೋಧಿ ನಿರ್ಧಾರಗಳನ್ನು ಪ್ರಕಟಿಸುವ ಮೂಲಕ ದಾರಿ ತಪ್ಪಿದರು. ಅವರು (ಕೇಜ್ರಿವಾಲ್) ಉತ್ತಮ ಕೆಲಸ ಮಾಡುತ್ತಿದ್ದರಿಂದ ನಾನು ಅವರ ವಿರುದ್ಧ ಏನನ್ನೂ ಮಾತನಾಡಲಿಲ್ಲ. ಆದರೆ, ನಂತರ ಅವರು ನಿಧಾನವಾಗಿ ಮದ್ಯದಂಗಡಿಗಳತ್ತ ಗಮನ ಕೊಡಲು ಶುರು ಮಾಡಿದರು. ಮದ್ಯದಂಗಡಿಗಳಿಗೆ ಪರವಾನಗಿಗಳನ್ನು ನೀಡಲು ಪ್ರಾರಂಭಿಸಿದರು. ಇದು ನನಗೂ ಬೇಸರ ತರಿಸಿತ್ತು. ಅಬಕಾರಿ ನೀತಿಯಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಅಣ್ಣಾ ಹಜಾರೆ ಹೇಳಿದರು.

ಇತ್ತೀಚೆಗೆಷ್ಟೇ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಅಧಿಕ ಸ್ಥಾನ ಗಳಿಸುವ ಮೂಲಕ 27 ವರ್ಷಗಳ ಬಳಿಕ ದೆಹಲಿಯ ಅಧಿಕಾರದ ಗದ್ದುಗೆ ಹಿಡಿದಿದೆ. ಫಲಿತಾಂಶದ ದಿನವೂ ಆಪ್ ಪಕ್ಷದ​ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಅಣ್ಣಾ ಹಜಾರೆ, ಎಎಪಿಯ ಕಳಪೆ ಪ್ರದರ್ಶನಕ್ಕೆ ಅದರ ನಾಯಕತ್ವ ಮತ್ತು ಭ್ರಷ್ಟಾಚಾರ ಹಗರಣಗಳಲ್ಲಿ ಭಾಗಿಯಾಗಿದ್ದೇ ಕಾರಣ ಎಂದು ಹೇಳಿದ್ದರು.

ಎಎಪಿಯ ನಾಯಕ ಕೇಜ್ರಿವಾಲ್, ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಅಣ್ಣಾ ಹಜಾರೆ ಅವರ ಸಹವರ್ತಿಯಾಗಿದ್ದರು. ಆಗಿನ ಯುಪಿಎ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಹಜಾರೆ ಅವರ ಮೌತ್​ ಪೀಸ್​ ಆಗಿದ್ದ ಕೇಜ್ರಿವಾಲ್​, ಬಳಿಕ ತಮ್ಮದೇ ಸ್ವಂತ ಪಕ್ಷ ಕಟ್ಟಿ ಮುನ್ನೆಲೆಗೆ ಬಂದವರು.

ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಖ್ಯಾತಿ ಗಳಿಸಿ, ಸತತ ಮೂರು ಅವಧಿಯಿಂದ ಅಧಿಕಾರದಲ್ಲಿ ಶೀಲಾ ದೀಕ್ಷಿತ್​ ಆಡಳಿತವನ್ನು ಕೊನೆಗೊಳಿಸಿದ ಹೆಗ್ಗಳಿಕೆ ಕೇಜ್ರಿವಾಲ್​ ಅವರದ್ದು, ಮೊದಲ ಬಾರಿಯ ಎಲೆಕ್ಷನ್​​​ ನಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ವಿಫಲರಾದರೂ ಎರಡನೇ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆಲ್ಲುವ ಮೂಲಕ ಕೇಜ್ರಿವಾಲ್​ ನೇತೃತ್ವದ ಆಪ್​​​​ ಇತಿಹಾಸ ಬರೆದಿತ್ತು.

WhatsApp Group Join Now
Telegram Group Join Now
Share This Article