ಅಂಜಲಿ ಹತ್ಯೆ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ ಪೊಲೀಸ್ ಬಲೆಗೆ

Ravi Talawar
ಅಂಜಲಿ ಹತ್ಯೆ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ ಪೊಲೀಸ್ ಬಲೆಗೆ
WhatsApp Group Join Now
Telegram Group Join Now

ಹುಬ್ಬಳ್ಳಿ, ಮೇ 17: ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಬರ್ಬರ ಹತ್ಯೆ ಪ್ರಕರಣದ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, ಆತನ ಬಂಧನವಾದ ರೀತಿ ರೋಚಕವಾಗಿದೆ. ಅಂಜಲಿ ಅಂಬಿಗೇರ ಹತ್ಯೆ ಮಾಡಿದ ಬಳಿಕ ಪರಾರಿಯಾಗಿದ್ದ ಆರೋಪಿ ವಿಶ್ವಮಾನವ ಎಕ್ಸ್​​ಪ್ರೆಸ್​​ ರೈಲಿನಲ್ಲಿ ಸಂಚರಿಸುತ್ತಿದ್ದಾಗಲೇ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆದರೆ, ರೈಲಿನಲ್ಲೂ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ!

ವಿಶ್ವ ಅಲಿಯಾಸ್ ಗಿರೀಶ್​ ವಿಶ್ವಮಾನವ ಎಕ್ಸ್​​ಪ್ರೆಸ್​​ ರೈಲಿನಲ್ಲಿ ತುಮಕೂರು ಮೂಲದ ಮಹಿಳೆಯೊಬ್ಬರ ಜತೆ ಜಗಳ ಮಾಡಿದ್ದಲ್ಲದೆ, ಚಾಕು ತೊರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದು ರೈಲಿನಲ್ಲಿದ್ದ ಪ್ರಯಾಣಿಕರು ಆತನಿಗೆ ಥಳಿಸಿದ್ದರು. ನಂತರ ಆತ ದಾವಣಗೆರೆ ತಾಲೂಕಿನ ಮಾಯಕೊಂಡ ರೈಲು ನಿಲ್ದಾಣದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ರೈಲಿನಿಂದ ಜಿಗಿದು ತಪ್ಪಿಸಿಕೊಳ್ಳುವುದಕ್ಕೆ ಯತ್ನಿಸಿದ್ದ. ಈ ವೇಳೆ, ಸಹ ಪ್ರಯಾಣಿಕರು ಸಂಶಯ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ ಪರಿಶೀಲನೆ ನಡೆಸಿದ ರೈಲ್ವೆ ಪೊಲೀಸರು, ಅಂಜಲಿ ಹತ್ಯೆ ಆರೋಪಿ ರೈಲಿನಲ್ಲಿದ್ದಾನೆ ಎಂದು ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಾಯಕೊಂಡಕ್ಕೆ ಬಂದ ಹುಬ್ಬಳ್ಳಿ ಪೊಲೀಸರು ತಡ‌ರಾತ್ರಿ ಆರೋಪಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ

ಆರೋಪಿ ಗಿರೀಶ್ ಮೈಸೂರಿನ ಮಹಾರಾಜ್ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ. ಹುಡುಗಿ ಅಂಜಲಿ ಮತ್ತು ಆರೋಪಿ ಪರಸ್ಪರ ಪ್ರೀತಿಸುತ್ತಿದ್ದರು. 15 ದಿನಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾಗಿಯೂ ಕೆಲವು ಮೂಲಗಳು ಮಾಹಿತಿ ನೀಡಿವೆ. ವಾರದ ಮುಂಚೆ ಯುವತಿ 2 ಸಾವಿರ ರೂಪಾಯಿ ಹಣ ಕೇಳಿದ್ದಳು. ಗಿರೀಶ್ ಒಂದು ಸಾವಿರ ರೂಪಾಯಿ ಪೋನ್ ಪೇ ಮಾಡಿದ್ದ. ಆ ನಂತರ ಗಿರೀಶನ ನಂಬರ್ ಅನ್ನು ಅಂಜಲಿ ಬ್ಲಾಕ್ ಲಿಸ್ಟ್​ ಮಾಡಿದ್ದಳು. ಫೋನ್ ಕರೆ ಕೂಡ ಸ್ವೀಕರಿಸುತ್ತಿರಲಿಲ್ಲ. ಆ ನಂತರ ಆರೋಪಿ ಸಿಟ್ಟಿಗೆದ್ದು ಮೈಸೂರಿ‌ನಿಂದ ಹುಬ್ಬಳ್ಳಿ ಗೆ ಬಂದು 4.30 ರ ಸುಮಾರಿಗೆ ಕೊಲೆ ಮಾಡಿದ್ದಾನೆ. ಅಲ್ಲಿಂದ ಹುಬ್ಬಳ್ಳಿ ಹೊಸ ಬಸ್ ಸ್ಟ್ಯಾಂಡ್​ಗೆ ಬಂದು ಹಾವೇರಿಗೆ ಬಂದಿದ್ದ. ಹಾವೇರಿಯಿಂದ ಮೈಸೂರಿಗೆ ರೈಲು ಹತ್ತಿದ್ದ. ಮಧ್ಯದಲ್ಲಿ ಬಿಹಾರ ವ್ಯಕ್ತಿಯೊಬ್ಬನ ಮೊಬೈಲ್ ನಲ್ಲಿ ಪೋಟೋ ನೋಡಿ ಮೈಸೂರಿಗೆ ವಾಪಸ್ ಹೋಗಿ ಮಹಾರಾಜ್ ಹೋಟೆಲ್​​ನಲ್ಲಿ ಮಲಗಿದ್ದ. ಆ ನಂತರ ಮೈಸೂರಿನಿಂದ ಹುಬ್ಬಳ್ಳಿಗೆ ವಾಪಸ್ ಆಗಲು ಬರುತ್ತಿದ್ದಾಗ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬುಧವಾರ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಕೊಲೆ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಆರೋಪಿ ಪತ್ತೆಗಾಗಿ ಎಂಟು ತಂಡವನ್ನು ರಚನೆ ಮಾಡಿದ್ದೆವು. ನಿನ್ನೆ ರೈಲ್ವೆ ಪೋಲಿಸರ ಸಹಾಯದಿಂದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಗಿರೀಶ್ ತಲೆ ಮತ್ತು ಬೆನ್ನಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಕೋಮಾ ಸ್ಥಿತಿಯಲ್ಲಿದ್ದಾನೆ. ರೈಲಿನಿಂದ ಯಾಕೆ ಕೆಳಗೆ ಬಿದ್ದ ಎಂಬುದನ್ನು ಆತನ ಹೇಳಿಕೆಯ ನಂತರವಷ್ಟೇ ತಿಳಿಯಬಹುದಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ ತಿಳಿಸಿದ್ದಾರೆ.

ಬೆಳಗಿನ ಜಾವ 4.30ಕ್ಕೆ ಆರೋಪಿಯನ್ನು ನಮ್ಮ ವಶಕ್ಕೆ ಪಡೆದಿದ್ದೇವೆ. ಮೈಸೂರಿನಿಂದ ಗೋವಾ ಮಹಾರಾಷ್ಟ್ರ ಕಡೆ ತಲೆಮೆರಸಿಕೊಳ್ಳಬೇಕು ಎಂದು ಆತ ಅಂದುಕೊಂಡಿದ್ದ. ಬೈಕ್ ಕಳ್ಳತನ ವಿಚಾರದಲ್ಲಿ ಆತನ ಮೇಲೆ 4 ಪ್ರಕಾರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article