ಅಮರಾವತಿ ಜೂನ್ 21: ಆಂಧ್ರ ಪ್ರದೇಶ ವಿಧಾನಸಭೆಯ ಮೊದಲ ಅಧಿವೇಶನ ಇಂದು(ಶುಕ್ರವಾರ) ಆರಂಭವಾಗಿದೆ. ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ‘ತನ್ನ ಕುಟುಂಬಕ್ಕೆ ಅವಮಾನವಾಗಿದೆ’ ಎಂದು ಸದನದಿಂದ ಹೊರಬಂದ 31 ತಿಂಗಳ ನಂತರ ಇಂದು ಆಂಧ್ರ ಪ್ರದೇಶ ವಿಧಾನಸಭೆಗೆ ಮರಳಿದ್ದಾರೆ.
ನಾಯ್ಡು ಅವರು ನವೆಂಬರ್ 2021 ರಲ್ಲಿ ಮುಖ್ಯಮಂತ್ರಿಯಾದ ನಂತರವೇ ವಿಧಾನಸಭೆಗೆ ಹಿಂತಿರುಗುವುದಾಗಿ ಪ್ರತಿಜ್ಞೆ ಮಾಡಿದ್ದರು, ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವ ರ ಪಕ್ಷವು ಪ್ರಚಂಡ ಗೆಲುವು ದಾಖಲಿಸಿ ಅವರು ಪ್ರತಿಜ್ಞೆಯನ್ನು ಪಾಲಿಸಿದ್ದಾರೆ.
175 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿಡಿಪಿ 135 ಸ್ಥಾನಗಳನ್ನು ಗೆದ್ದರೆ, ಅವರ ಮಿತ್ರಪಕ್ಷಗಳಾದ ಜನಸೇನಾ ಮತ್ತು ಬಿಜೆಪಿ ಕ್ರಮವಾಗಿ 21 ಮತ್ತು 8 ಸ್ಥಾನಗಳನ್ನು ಗೆದ್ದಿವೆ. ನಾಯ್ಡು ಅವರು ಇಂದು (ಶುಕ್ರವಾರ) ಮುಖ್ಯಮಂತ್ರಿಯಾಗಿ ಕಾಲಿಡುತ್ತಿದ್ದಂತೆ ಅವರಿಗೆ ಆತ್ಮೀಯ ಸ್ವಾಗತ ನೀಡಲು ಇಡೀ ಸದನ ಎದ್ದು ನಿಂತಿದೆ.ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಇದು ನಾಲ್ಕನೇ ಅವಧಿಯಾಗಿದೆ.
ಅವರು ನವೆಂಬರ್ 19, 2021 ರಂದು, ಆಗಿನ ಆಡಳಿತದಲ್ಲಿದ್ದ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ಸದಸ್ಯರು ತಮ್ಮ ಪತ್ನಿಯ ಬಗ್ಗೆ ಮಾಡಿದ ನಿಂದನೀಯ ಹೇಳಿಕೆಗಳಿಂದ ನೊಂದು ನಾಯ್ಡು ಸದನ ತೊರೆದಿದ್ದರು. ಮಹಿಳಾ ಸಬಲೀಕರಣದ ಕುರಿತು ನಡೆದ ಚರ್ಚೆಯಲ್ಲಿ ಕೈಮುಗಿದು ಕಣ್ಣೀರು ಹಾಕಿ ನಾಯ್ಡು ಸದನದಿಂದ ಹೊರ ನಡೆದಿದ್ದರು.
ಇನ್ನು ಮುಂದೆ ನಾನು ಈ ಸಭೆಗೆ ಹಾಜರಾಗುವುದಿಲ್ಲ. ನಾನು ಮುಖ್ಯಮಂತ್ರಿಯಾದ ನಂತರವೇ ಸದನಕ್ಕೆ ಮರಳುತ್ತೇನೆ ಎಂದು ಹೇಳಿದ ನಾಯ್ಡು, ಮಹಾಭಾರತದಲ್ಲಿ ದ್ರೌಪದಿಯನ್ನು ಅವಮಾನಿಸಿದ ಸಭಾಂಗಣವನ್ನು ಉಲ್ಲೇಖಿಸಿ ಈ ಸಭೆಯು ‘ಕೌರವ ಸಭೆ’ಯಾಗಿದೆ ಎಂದು ಹೇಳಿದರು.