ಮುಂಬೈ: ದೇಶದ ಸಿರಿವಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಕಿರಿಪುತ್ರ ಅನಂತ್ ಮದುವೆ ಕಳೆದ ದಿನ (ಶುಕ್ರವಾರ, ಜುಲೈ 12) ಅದ್ಧೂರಿಯಾಗಿ ಜರುಗಿತು. ವೈಭವೋಪೇತ ವಿವಾಹ ಸಮಾರಂಭದಲ್ಲಿ ಅನಂತ್ ಅಂಬಾನಿ ಅವರು ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ಕ್ಷಣಕ್ಕೆ ಬಾಲಿವುಡ್ ಸೇರಿದಂತೆ ವಿಶ್ವದ ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾಗಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಪುತ್ರ ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ಶುಕ್ರವಾರ ಸಂಜೆ ಮುಂಬೈನಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನ ಆರಂಭಿಸಿದರು. ಸೋಷಿಯಲ್ ಮೀಡಿಯಾದಲ್ಲೀಗ ಅಂಬಾನಿ ಗ್ರ್ಯಾಂಡ್ ವೆಡ್ಡಿಂಗ್ನದ್ದೇ ಸದ್ದು.
ವೈರಲ್ ಆಗುತ್ತಿರುವ ಫೋಟೋ ವಿಡಿಯೋಗಳಲ್ಲಿ ನವ ದಂಪತಿ ತಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರಿಂದ ಸುತ್ತುವರಿದಿರುವುದನ್ನು ಕಾಣಬಹುದು. ಭಾರತದಲ್ಲಿರುವ ಚೀನಾ ರಾಯಭಾರಿ ಕ್ಸು ಫೀಹಾಂಗ್ ಅವರು ವಿವಾಹದ ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅನಂತ್ ಮತ್ತು ರಾಧಿಕಾ ಫೆರಾ ಶಾಸ್ತ್ರಕ್ಕೆ ಹೋಗುತ್ತಿರುವುದನ್ನು ನೋಡಬಹುದು.