ಆನಂದ ಪಾಟೀಲ ಅವರು ನಾಡಿನ ಸೃಜನಶೀಲ ಮಕ್ಕಳ ಸಾಹಿತಿ: ಸ.ರಾ. ಸುಳಕೂಡೆ

Ravi Talawar
ಆನಂದ ಪಾಟೀಲ ಅವರು ನಾಡಿನ ಸೃಜನಶೀಲ ಮಕ್ಕಳ ಸಾಹಿತಿ: ಸ.ರಾ. ಸುಳಕೂಡೆ
WhatsApp Group Join Now
Telegram Group Join Now
ಧಾರವಾಡ: ಅನೇಕ ಮೌಲಿಕ ಕೃತಿಗಳನ್ನು ರಚಿಸಿ ಮಕ್ಕಳ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಆನಂದ ಪಾಟೀಲ ಅವರು ಸೃಜನಶೀಲ ಮಕ್ಕಳ ಸಾಹಿತಿ ಎಂದು ಹೊಂಬೆಳಕು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಸ.ರಾ.ಸುಳಕೂಡೆ ಪ್ರಶಂಸೆ ವ್ಯಕ್ತಪಡಿಸಿದರು. ಬೆಂಗಳೂರಿನ ಭಾರತೀಯ ವಿದ್ಯಾ ಭವನ ಮತ್ತು ವಿನಾಯಕ ಗೋಕಾಕ ವಾಙ್ಮಯ ಟ್ರಸ್ಟ್ (ರಿ) ಜೊತೆಗೂಡಿ ಅರ್ಪಿಸಿದ 2025ರ ವಿ.ಕೃ.ಗೋಕಾಕ್ ಪ್ರಶಸ್ತಿ ಪುರಸ್ಕೃತರಾದ ಆನಂದ ಪಾಟೀಲ ಅವರನ್ನು ನಗರದ ಆಝಾದ ಉಪವನದ ಗಾಂಧೀಜಿಯವರ ಪ್ರತಿಮೆಯ ಆವರಣದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು. ಮಕ್ಕಳ ಸಾಹಿತ್ಯವನ್ನು ರಚನೆಯಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿದ ಪಾಟೀಲರ ಮುಗ್ಧತೆ, ಕ್ರಿಯಾಶೀಲತೆ ಮತ್ತು ಶಿಸ್ತು ಮೆಚ್ಚುವಂತದ್ದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಆಕಾಶವಾಣಿಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳ ಸಾಹಿತ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತಲುಪಿಸಿದ ಕೀರ್ತಿ ಅವರದ್ದು ಎಂದು ಸಂತಸ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆನಂದ ಪಾಟೀಲ ಎಲ್ಲರೂ ಮಕ್ಕಳ ಸಾಹಿತ್ಯವನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಬಾಲ್ಯದ ಅನುಭವಗಳು ಬರಹದಲ್ಲಿ ಮೂಡಿ ಮಕ್ಕಳಿಗೆ ಪ್ರೇರಣೆಯಾದಾಗ ಮಾತ್ರ ಸಾಹಿತ್ಯ ಕೃಷಿಗೆ ಸಾರ್ಥಕತೆ ಎಂದು ಅವರು ಹೇಳಿದರು. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ ಪಡೆದ ಮಗುತನದ ಸಾಹಿತಿಗಳಾದ ಆನಂದ ಅವರ ಉತ್ಕೃಷ್ಟ ವಿಚಾರಧಾರೆಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಎಂದು ಹೇಳಿದರು. ಮಕ್ಕಳ ಸಾಹಿತ್ಯ ರಚನೆಯ ಜೊತೆಗೆ ಅಂತರ್ಜಾಲ ಪತ್ರಿಕೆಯನ್ನೂ ಹೊರತರುತ್ತ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಅವರ ಕ್ರಿಯಾಶೀಲತೆಗೆ ಸಾಕ್ಷಿ ಎಂದರು.
ಶಿಕ್ಷಣ ತಜ್ಞರಾದ ಅಶೋಕ ಉಳ್ಳೇಗಡ್ಡಿ ಮಾತನಾಡಿ ನವಲಗುಂದದಲ್ಲಿ ಜನಿಸಿದ ಆನಂದ ಅವರು ‘ಜನಪದ ಕಲೆಗಳು ಮತ್ತು ವಿಧಿಕ್ರಿಯೆ’ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದು ಸಾಕಷ್ಟು ಅಧ್ಯಯನ ಮಾಡಿದ ಅಪರೂಪದ ವ್ಯಕ್ತಿ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಅಜ್ಜೀ ಮನೆ ಬಹಳ ದೂರ, ಹೂ, ಹಕ್ಕಿ ಪುಟಾಣಿ, ಬೆಳದಿಂಗಳು, ಹತ್ತು ಹತ್ತು ಇಪ್ಪತ್ತು, ಮತ್ತೆ ಬಂತು ಚಂಪು, ಪುಟ್ಟಕ್ಕನ ಪತ್ರಗಳು, ಅಲರು, ಖಾಲಿ ಕಡ್ಡಿ ಪೆಟ್ಟಿಗೆ ಮುಂತಾದ ಕವನ ಸಂಕಲನ, ಕಥೆ, ಕಾದಂಬರಿ, ಕಥನ ಕಾವ್ಯ, ನಾಟಕ, ಹಾಸ್ಯ ಬರಹಗಳನ್ನು ಬರೆದ ಆನಂದ ಪಾಟೀಲರ ಸಾಧನೆ ಹೆಮ್ಮೆ ತರುವಂತದ್ದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article