ಅಕ್ರಮ ಅದಿರು ಕೇಸ್‌ನಲ್ಲಿ ಆನಂದ್‌ ಸಿಂಗ್‌ ಸೇರಿ 12 ಮಂದಿ ಖುಲಾಸೆ

Ravi Talawar
ಅಕ್ರಮ ಅದಿರು ಕೇಸ್‌ನಲ್ಲಿ ಆನಂದ್‌ ಸಿಂಗ್‌ ಸೇರಿ 12 ಮಂದಿ ಖುಲಾಸೆ
WhatsApp Group Join Now
Telegram Group Join Now

ಬೆಂಗಳೂರು: ಬಳ್ಳಾರಿಯ ವ್ಯಾಸನಕೆರೆ ಗಣಿಯಿಂದ ಅಕ್ರಮ ಅದಿರು ಸಾಗಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಆನಂದ ಸಿಂಗ್ ಮತ್ತು ಗೋವಾದ ಹಾಲಿ ಸಚಿವ ರೋಹನ್ ಅಶೋಕ್ ಖಾವುಂತೆ ಸೇರಿದಂತೆ ಇತರರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಪಡಿಸಿದೆ. ಈ ಸಂಬಂಧ ಕಾಯ್ದಿರಿಸಿದ್ದ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ಪ್ರಕಟಿಸಿತು.

ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡ ಪ್ರಕರಣವನ್ನು ಸಾಬೀತುಪಡಿಸಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿಶೇಷ ನ್ಯಾಯಾಲಯವು ಮಾಜಿ ಸಚಿವ ಆನಂದ್ ಸಿಂಗ್ ಮತ್ತು ಗೋವಾ ಪ್ರವಾಸೋದ್ಯಮ ಸಚಿವ ರೋಹನ್ ಎಸ್ ಖೌಂಟೆ ಸೇರಿದಂತೆ 12 ಆರೋಪಿಗಳನ್ನು ಮತ್ತು ಮೂರು ಸಂಸ್ಥೆಗಳನ್ನು ಕಬ್ಬಿಣದ ಅದಿರು ಅಕ್ರಮ ರಫ್ತು ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.

ಬಿಜೆಪಿ ಶಾಸಕ ಆನಂದ್ ಸಿಂಗ್, ಬಿ ಎಸ್‌ ಗೋಪಾಲ ಸಿಂಗ್, ಬಿ ಎಸ್‌ ಪಾಂಡುರಂಗ ಸಿಂಗ್, ಮೆಸರ್ಸ್‌ ನೈವೇದ್ಯ ಲಾಜಿಸ್ಟಿಕ್ಸ್, ರಾಜೇಶ್ ಅಶೋಕ್‌ ಖಾವುಂತೆ, ರೋಹನ್ ಖಾವುಂತೆ, ಶಾಜು ನಾಯರ್, ರಿಯಾ ನಾಯರ್, ಮೊಹಮ್ಮದ್ ಮುನೀರ್, ಕ್ಲಾರಿಯಾ ಮಾರ್ಕೆಟಿಂಗ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌, ಆನಂದ್‌ ಸಿಂಗ್‌ ಮಾಲೀಕತ್ವದ ಎಸ್‌ ಬಿ ಮಿನರಲ್ಸ್‌ ಅನ್ನು ದೋಷಮುಕ್ತಗೊಳಿಸಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿರುವ ನ್ಯಾಯಾಧೀಶರು, ಆನಂದ್ ಸಿಂಗ್ ಸೇರಿದಂತೆ ಎಲ್ಲಾ ಆರೋಪಿಗಳನ್ನೂ ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶಿಸಿದ್ದಾರೆ. “ಆರೋಪಿಗಳು, ಎಸ್ ಬಿ ಮಿನರಲ್ಸ್‌ಗೆ ಸೇರಿದ ಗಣಿಯಿಂದ 16,987 ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ₹1.53 ಕೋಟಿ ನಷ್ಟ ಉಂಟುಮಾಡಿದ್ದಾರೆ” ಎಂದು ಆರೋಪಿಸಲಾಗಿತ್ತು.

WhatsApp Group Join Now
Telegram Group Join Now
Share This Article