ಮಾದಿಗ ಸಮುದಾಯಕ್ಕೆ ಸಂಪೂರ್ಣ ಒಳಮೀಸಲಾತಿ: ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ!

Pratibha Boi
ಮಾದಿಗ ಸಮುದಾಯಕ್ಕೆ ಸಂಪೂರ್ಣ ಒಳಮೀಸಲಾತಿ: ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ!
WhatsApp Group Join Now
Telegram Group Join Now
ಬೆಳಗಾವಿ: (ಡಿ11) ಮಾದಿಗ ಕ್ರಾಂತಿಕಾರಿ ಒಳಮೀಸಲಾತಿ ಹೋರಾಟ ಸಮಿತಿಯು, ಸಂಪೂರ್ಣ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿರಂತರ ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕರ್ನಾಟಕದ ಸುಮಾರು 40 ಲಕ್ಷ ಮಾದಿಗ ಸಮುದಾಯದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಪತ್ರ ಸಲ್ಲಿಸಿ, ಕೂಡಲೇ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಲಾಗಿದೆ.
ಸುಪ್ರೀಂ ಕೋರ್ಟ್ ಒಳಮೀಸಲಾತಿ ಕುರಿತು ಸಕಾರಾತ್ಮಕ ಆದೇಶ ನೀಡಿ 16 ತಿಂಗಳುಗಳು ಕಳೆದಿದ್ದರೂ, ರಾಜ್ಯ ಸರ್ಕಾರವು ಸಮುದಾಯದ ಬಗ್ಗೆ ‘ದಿವ್ಯ ನಿರ್ಲಕ್ಷ್ಯ’ ವಹಿಸಿದೆ ಎಂದು ಸಮಿತಿ ಆಪಾದಿಸಿದೆ. ಈ ಅವಧಿಯಲ್ಲಿ ಲೆಕ್ಕವಿಲ್ಲದಷ್ಟು ಮನವಿಗಳು, ಪ್ರತಿಭಟನೆಗಳು ನಡೆದಿದ್ದರೂ, ನ್ಯಾಯ ಸಿಗದಿರುವುದು ಮಾದಿಗ ಸಮುದಾಯದಲ್ಲಿ ಪಕ್ಷ ಮತ್ತು ಸರ್ಕಾರದ ಬಗ್ಗೆ ತೀವ್ರ ಅಸಮಾಧಾನ ಮೂಡಿಸಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
ಸಂಪೂರ್ಣ ಒಳಮೀಸಲಾತಿ ಎಂದರೆ ಶಿಕ್ಷಣ, ಉದ್ಯೋಗ, ಬಡ್ತಿ, ಬ್ಯಾಕ್‌ಲಾಗ್, ಹಣಕಾಸು ಹಂಚಿಕೆ ಮತ್ತು ರಾಜಕಾರಣದ ಎಲ್ಲ ಕ್ಷೇತ್ರಗಳಲ್ಲೂ ಜಾರಿ ಆಗಬೇಕು. ಇದು ಜಾರಿಯಾಗದೇ ಇರುವುದರಿಂದ ಸಮುದಾಯದ ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಯುವಕರು ನೂರಾರು ಅವಕಾಶಗಳಿಂದ ವಂಚಿತರಾಗಿ ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಇದು ಮುಂದಿನ ಚುನಾವಣೆಗಳಲ್ಲಿ ಪಕ್ಷ ಮತ್ತು ಸರ್ಕಾರಕ್ಕೆ ಭಾರಿ ಪರಿಣಾಮ ಬೀರಲಿದೆ ಎಂದು ಸಮಿತಿ ನೋವಿನಿಂದ ಎಚ್ಚರಿಕೆ ನೀಡಿದೆ.
ತಕ್ಷಣದ ಕ್ರಮಕ್ಕೆ ಆಗ್ರಹ:
ಶತಮಾನಗಳಿಂದ ಅನ್ಯಾಯಕ್ಕೆ ಒಳಗಾಗಿರುವ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯದ ಹಕ್ಕು ನೀಡಬೇಕು. ಹಾಗೆಯೇ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಆದಿವಾಸಿಗಳು, ಅಲೆಮಾರಿಗಳು ಮತ್ತು ಬುಡಕಟ್ಟು ಜನಾಂಗದವರಿಗೂ ಸೂಕ್ತ ಒಳಮೀಸಲಾತಿಯ ನ್ಯಾಯ ಒದಗಿಸಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಈಡೇರಿಸಲು ಸರ್ಕಾರ ತಕ್ಷಣ ಸಂಪೂರ್ಣ ಒಳಮೀಸಲಾತಿಯನ್ನು ಘೋಷಿಸಬೇಕೆಂದು ಸಮಿತಿ ಒತ್ತಾಯಿಸಿದೆ.
ಈ ಆಗ್ರಹ ಪತ್ರದೊಂದಿಗೆ, ವಿವಿಧ ಹೊರಗುತ್ತಿಗೆ ನೌಕರರ ಮತ್ತು ಪೌರ ನೌಕರರ ಸಂಘಗಳ ಮನವಿ ಪತ್ರಗಳನ್ನು ಸಹ ಲಗತ್ತಿಸಲಾಗಿದೆ. ಬೇಡಿಕೆಗಳನ್ನು ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಸ್ವರೂಪದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಮಿತಿ ಎಚ್ಚರಿಸಿದೆ.
    ಪ್ರತಿಭಟನೆ ಸ್ಥಳಕ್ಕೆ ಅಲ್ಪಸಂಖ್ಯಾತರ ಮತ್ತು ವಕ್ಟ್ ಸಚಿವ ಜಮೀರ್ ಅಹಮ್ಮದ ಖಾನ್ ಬೇಟಿ ನೀಡಿ ಮನವಿ ಪಡೆದು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವದು ಎಂದರು.
WhatsApp Group Join Now
Telegram Group Join Now
Share This Article