ಉಡುಪಿ, ಏಪ್ರಿಲ್ 17: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮನೆಯಿಂದಲೇ ಮತದಾನ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರು ಮನೆಯಿಂದಲೇ ಮತದಾನ ಮಾಡುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿಯೂ ಈ ಪ್ರಕ್ರಿಯೆ ನಡೆಯುತ್ತಿದ್ದು, ಮತದಾನ ಮಾಡಿ ಕೆಲವೇ ಕ್ಷಣಗಳಲ್ಲಿ ವಯೋವೃದ್ಧೆ ಮೃತಪಟ್ಟ ಘಟನೆ ನಡೆದಿದೆ.
ಬ್ರಹ್ಮಾವರ ತಾಲೂಕಿನ ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದ ನಿವಾಸಿಯಾಗಿದ್ದ ಪಿ.ಯಶೋಧಾ ನಾರಾಯಣ ಉಪಾಧ್ಯ (83) ಎನ್ನುವವರು, ಲೋಕಸಭಾ ಚುನಾವಣೆಯಲ್ಲಿ ಮನೆಯಲ್ಲಿ ಮತದಾನ ಮಾಡಿ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ.
ಮತದಾನದ ದಿನ ಪಿ.ಯಶೋಧಾ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಯಶೋಧಾ ನಾರಾಯಣ ಅವರು, ಮತದಾನ ಮಾಡಿಯೇ ಆಸ್ಪತ್ರೆ ತೆರಳುತ್ತೇನೆ ಎಂದು ಕುಟುಂಬಸ್ಥರ ಬಳಿ ತಿಳಿಸಿದ್ದರು. ಹೀಗಾಗಿ ಉಡುಪಿ ಜಿಲ್ಲಾ ಚುನಾವಣಾ ಅಧಿಕಾರಿಗಳ ಸಹಾಯದಿಂದ ಯಶೋಧಾ ಅವರು ಮನೆಯಿಂದಲೇ ಮತದಾನ ಮಾಡಿದ್ದಾರೆ.
ಮತದಾನ ಮಾಡಿದ ಬಳಿಕ ಎದೆನೋವು ಹೆಚ್ಚಾದ ಕಾರಣ ಪಿ.ಯಶೋಧಾ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ