ಗದಗ : ನಾಡಿನ ನಡೆದಾಡುವ ದೇವರಾದ ಲಿಂ. ಪಂ. ಪುಟ್ಟರಾಜ ಗವಾಯಿಗಳವರ ೧೧೨ ನೇ ಜನ್ಮದಿನದ ಅಂಗವಾಗಿ ದಿ.ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ವತಿಯಿಂದ ನಗರಸಭೆಯ ಮಾಜಿ ಅಧ್ಯಕ್ಷರಾದ ಪೀರಸಾಬ್ ಕೌತಾಳ ಅವರ ನೇತೃತ್ವದಲ್ಲಿ ಮಾ. ೩ ರಂದು ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವೀರೇಶ್ವರ ಪುಣ್ಯಾಶ್ರಮದ ಪರಮ ಭಕ್ತರಾದ ಪೀರಸಾಬ್ ಕೌತಾಳ ದಂಪತಿಗಳು ಕಳೆದ ೧೨ ವರ್ಷದಿಂದ ಪೂಜ್ಯ ಗುರುಗಳ ಜನ್ಮದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದು, ಕಳೆದ ೭ ವರ್ಷಗಳಿಂದ ಗುರುಗಳ ಜನ್ಮದಿನಾಚರಣೆಯ ಅಂಗವಾಗಿ ಸರ್ವ ಧರ್ಮಗಳ ಸಾಮೂಹಿಕ ವಿವಾಹ ಮಹೋತ್ಸವವನ್ನು ಉಚಿತವಾಗಿ ಮಾಡುತ್ತ ಬರುತ್ತಿರುವುದು ಸಂತಸ ವಿಷಯವಾಗಿದೆ. ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗವಹಿಸುವ ವಧುವಿಗೆ ತಾಳಿ, ಬಟ್ಟೆ, ಕಾಲುಂಗುರ ಮತ್ತು ವರರಿಗೆ ಬಟ್ಟೆಗಳನ್ನು ನೀಡಲಾಗುವುದು. ಅಂದು ಬೆಳಿಗ್ಗೆ ಕುಂಭೋತ್ಸವ, ಧರ್ಮಸಭೆ ನಂತರ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗುವದು ಇದೇ ಸಂದರ್ಭದಲ್ಲಿ ಕೊಪ್ಪಳದ ಹಿರಿಯ ಸಂಗೀತಗಾರರಾದ ಸದಾಶಿವ ಪಾಟೀಲ ಅವರಿಗೆ ಪಂ. ಪುಟ್ಟರಾಜ ಕವಿ ಗವಾಯಿಗಳವರ ಹೆಸರಿನಲ್ಲಿ ನಗದು ಸಹಿತ ಪ್ರಶಸ್ತಿ ನೀಡಲಾಗುವುದು. ಎಲ್ಲರೂ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ದಿ.ಕೆ.ಎಚ್.ಪಾಟೀಲ ಅಭಿಮಾನಿ ಬಳಗದ ಅಧ್ಯಕ್ಷರಾದ ಪೀರಸಾಬ್ ಕೌತಾಳ ಅವರು ಮಾತನಾಡಿ, ಪೂಜ್ಯಶ್ರೀ ಪಂ. ಪುಟ್ಟರಾಜ ಗವಾಯಿಗಳವರ ಜಯಂತಿ ದಿನದಂದು ಮದುವೆಯಾಗುವುದು ಪೂರ್ವಜನ್ಮದ ಪುಣ್ಯಯಾಗಿದೆ. ಕಳೆದ ೭ ವರ್ಷಗಳಿಂದ ನಿರಂತರವಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಮಾ. ೨ ರಂದು ಸಂಜೆ ರಸಮಂಜರಿ ಕಾರ್ಯಕ್ರಮ ಮತ್ತು ಮಾ. ೩ ರಂದು ೧೦೧೨ ಕುಂಭಮೇಳದ ಮೆರವಣಿಗೆ ನಡೆಯಲಿದೆ. ಮಾ. ೩ ರಂದು ನಡೆಯುವ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಧುವರರು ಇದೇ ಫೆ. ೨೫ ರ ಒಳಗಾಗಿ ಶ್ರೀಮಠದ ಕಚೇರಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಶ್ರೀಮಠದ ವ್ಯವಸ್ಥಾಪಕರಾದ ಹೇಮರಾಜ ಶಾಸ್ತ್ರಿಗಳು ಹೆಡಿಗ್ಗೊಂಡ ಮೋ. ಸಂ.೯೯೪೫೨೫೫೮೫೮, ಸಹ ವ್ಯವಸ್ಥಾಪಕರಾದ ಶರಣಯ್ಯ ಹಿಡ್ಕಿಮಠ ಮೋ.ಸಂ.೭೩೫೩೨೬೬೪೫೫ ಹಾಗೂ ರಾಮಯ್ಯ ೮೧೫೧೯೪೦೩೯೪ ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ಪಿ.ಸಿ.ಹಿರೇಮಠ, ಆನಂದ ಸಾಲಿಗ್ರಾಮ, ಮಂಜುನಾಥ ಮುಳಗುಂದ, ವಿನೋದ ಶಿದ್ಲಿಂಗ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


