ಅಹಮದಾಬಾದ್: ಗುಜರಾತ್ನ ಕಚ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 3.3 ತೀವ್ರತೆಯ ಭೂ ಕಂಪನ ಸಂಭವಿಸಿದೆ ಎಂದು ಭೂಕಂಪನ ಸಂಶೋಧನಾ ಸಂಸ್ಥೆ (ಐಎಸ್ಆರ್) ತಿಳಿಸಿದೆ. ಭೂಕಂಪನದಿಂದ ಜಿಲ್ಲೆಯಲ್ಲಿ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ 10.05 ರ ಹೊತ್ತಿಗೆ ಕಂಪನ ಸಂಭವಿಸಿದ್ದು, ರಾಪರ್ ನ ಪಶ್ಚಿಮ ನೈರುತ್ಯಕ್ಕೆ 12 ಕಿಮೀ ದೂರದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಗಾಂಧಿನಗರ ಮೂಲದ ಐಎಸ್ಆರ್ ತಿಳಿಸಿದೆ.
ಇದು ಈ ತಿಂಗಳಿನಲ್ಲಿ ಸೌರಾಷ್ಟ್ರ-ಕಚ್ ಪ್ರದೇಶದಲ್ಲಿ ಇಲ್ಲಿಯವರೆಗೂ ದಾಖಲಾದ 3 ಕ್ಕಿಂತ ಹೆಚ್ಚು ತೀವ್ರತೆಯ ನಾಲ್ಕನೇ ಕಂಪನವಾಗಿದೆ ಎಂದು ಐಎಸ್ಆರ್ ಮಾಹಿತಿ ನೀಡಿದೆ.
ಗುಜರಾತ್ನಲ್ಲಿ ಭೂಕಂಪನದ ಅಪಾಯ ತುಂಬಾ ಹೆಚ್ಚಾಗಿದೆ. ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (GSDMA) ಒದಗಿಸಿದ ಮಾಹಿತಿಯ ಪ್ರಕಾರ, ಕಳೆದ 200 ವರ್ಷಗಳಲ್ಲಿ ಇಲ್ಲಿ ಒಂಬತ್ತು ಪ್ರಮುಖ ಭೂಕಂಪನ ಆಗಿದೆ.
2001 ರ ಕಚ್ ಭೂಕಂಪ ಕಳೆದ ಎರಡು ಶತಮಾನಗಳಲ್ಲಿ ಭಾರತದಲ್ಲಿ ಸಂಭವಿಸಿದ ಮೂರನೇ ಅತಿದೊಡ್ಡ ಮತ್ತು ಎರಡನೇ ವಿನಾಶಕಾರಿ ಭೂಕಂಪವಾಗಿದೆ ಎಂದು ಹೇಳಿದೆ.