ನವದೆಹಲಿ, ಆಗಸ್ಟ್ 16: ಭಾರತದ ಉತ್ಪನ್ನಗಳ ಆಮದಿಗೆ ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕ, ಇದೀಗ ರಷ್ಯಾ ಜೊತೆಗಿನ ಮಾತುಕತೆಯ ನಂತರ ಆ ನಿರ್ಧಾರವನ್ನು ಹಿಂಪಡೆಯಲಿದೆಯೇ? ಇಂಥದ್ದೊಂದು ಅನುಮಾನಕ್ಕೆ ಡೊನಾಲ್ಡ್ ಟ್ರಂಪ್ ಈಗ ನೀಡಿರುವ ಹೇಳಿಕೆ ಕಾರಣವಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ನಂತರ ಸಂದರ್ಶನವೊಂದರಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ವಿಧಿಸಿರುವ ಸುಂಕದ ಬಗ್ಗೆ ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.
ಭಾರತದ ಉತ್ಪನ್ನಗಳ ಆಮದಿಗೆ ಹೆಚ್ಚುವರಿ ಸುಂಕ ಪರಿಶೀಲನೆ: ಟ್ರಂಪ್

ಕಳೆದ ವಾರವಷ್ಟೇ ಟ್ರಂಪ್ ಭಾರತದ ಉತ್ಪನ್ನಗಳ ಮೇಲೆ ಶೇ 25 ರಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದರು. ಇದರೊಂದಿಗೆ, ಭಾರತದ ಉತ್ಪನ್ನಗಳ ಆಮದಿನ ಮೇಲೆ ಅಮೆರಿಕ ವಿಧಿಸಿದ್ದ ಸುಂಕದ ಪ್ರಮಾಣ ಶೇ 50 ತಲುಪಿತ್ತು. ಅಷ್ಟೇ ಅಲ್ಲದೆ, ಪುಟಿನ್ ಜತೆಗಿನ ಮಾತುಕತೆ ವಿಫಲವಾದರೆ ಭಾರತದ ಮೇಲೆ ಮತ್ತೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಟ್ರಂಪ್ ಹೇಳಿದ್ದರು. ಏತನ್ಮಧ್ಯೆ, ‘ಒಮ್ಮತಕ್ಕೆ ಬಾರದೆ ಒಪ್ಪಂದ ಸಾಧ್ಯವಿಲ್ಲ’ ಎಂದು ವ್ಲಾಡಿಮಿರ್ ಪುಟಿನ್ ಜತೆಗಿನ ದ್ವಿಪಕ್ಷೀಯ ಮಾತುಕತೆಯ ಬಳಿಕ ಡೊನಾಲ್ಡ್ ಟ್ರಂಪ್ ಹೇಳಿದ್ದು, ಅಮೆರಿಕವು ಭಾರತದ ಮೇಲೆ ಮತ್ತಷ್ಟು ಸುಂಕ ವಿಧಿಸಲಿದೆಯೇ ಎಂಬ ಅನುಮಾನಗಳಿಗೆ ಕಾರಣವಾಗಿತ್ತು. ಇದೀಗ ಟ್ರಂಪ್, ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲಿನ ಸುಂಕದ ಬಗ್ಗೆ 2-3 ವಾರಗಳಲ್ಲಿ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.