ಅಹಮದಾಬಾದ್,04: ಕೇರಳದ ವಯನಾಡು ಮತ್ತು ಉತ್ತರಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ವಯನಾಡಿನಲ್ಲಿ ಸೋಲುವ ಭಯದಲ್ಲಿ ರಾಹುಲ್ ರಾಯ್ಬರೇಲಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎಂದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಗುಜರಾತ್ನಲ್ಲಿ ಚುನಾವಣಾ ಪ್ರಚಾರದ ವೇಳೆ ಈ ಬಗ್ಗೆ ವಾಗ್ದಾಳಿ ನಡೆಸಿ, ರಾಹುಲ್ ಬಾಬಾ ವಯನಾಡಿನ ಜೊತೆಗೆ ರಾಯ್ಬರೇಲಿಯಲ್ಲೂ ಭಾರೀ ಅಂತರದಿಂದ ಸೋಲುವುದು ಖಂಡಿತ. ಭಯದಲ್ಲಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಲೋಕಸಭೆ ಚುನಾವಣೆಯನ್ನು ಎದುರಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಅಮೇಠಿಯಿಂದ ಸೋತ ಬಳಿಕ ವಯನಾಡಿಗೆ ವಲಸೆ ಹೋಗಿದ್ದರು. ಈ ಬಾರಿ ವಯನಾಡಿನಲ್ಲಿ ಸೋಲುತ್ತಾರೆ ಎಂಬ ಅರಿವಾದ ಬಳಿಕ ಅಮೇಠಿ ಬದಲು ರಾಯ್ ಬರೇಲಿಯಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಶಾ ಹೇಳಿದರು.
ಸಮಸ್ಯೆ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಇಲ್ಲ. ನಿಮ್ಮಲ್ಲೇ ಸಮಸ್ಯೆ ಇಟ್ಟುಕೊಂಡು ಕ್ಷೇತ್ರ ಬದಲಾವಣೆ ಮಾಡುತ್ತಿದ್ದರೆ, ಜನರು ನಿಮ್ಮನ್ನು ಹುಡುಕಿ ಮತ್ತೆ ಸೋಲಿಸುತ್ತಾರೆ. ರಾಯ್ಬರೇಲಿಯಲ್ಲಿ ನಿಮ್ಮ ಸೋಲು ಪಕ್ಕಾ ಎಂದು ಶಾ ಭವಿಷ್ಯ ನುಡಿದರು.
ಪ್ರಧಾನಿ ವಿರುದ್ಧ ಸುಳ್ಳು ಪ್ರಚಾರ: ದಲಿತರು, ಬುಡಕಟ್ಟು, ಹಿಂದುಳಿದ ವರ್ಗಗಳಿಗೆ ಸಂವಿಧಾನ ನೀಡಿರುವ ಮೀಸಲಾತಿಯನ್ನು ಮುಸ್ಲಿಮವರಿಗೆ ನೀಡಲು ಕಾಂಗ್ರೆಸ್ ಹೊಂಚು ಹಾಕಿದೆ. ಕೆಲ ರಾಜ್ಯಗಳಲ್ಲಿ ಮೀಸಲಾತಿಯನ್ನು ಅಲ್ಪಸಂಖ್ಯಾತರಿಗೆ ನೀಡಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೊಂದು ಅವಧಿಗೆ ಗೆದ್ದು ಅಧಿಕಾರಕ್ಕೆ ಬಂದರೆ, ಮೀಸಲಾತಿಯನ್ನು ರದ್ದು ಮಾಡುತ್ತಾರೆ ಎಂದು ರಾಹುಲ್ ಬಾಬಾ ಅಂಡ್ ಕಂಪನಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಎರಡು ಅವಧಿಯಲ್ಲಿ ಮೀಸಲಾತಿಯನ್ನು ನಮ್ಮ ಸರ್ಕಾರ ಮುಟ್ಟಲಿಲ್ಲ. ಬಿಜೆಪಿ ಅಧಿಕಾರಲ್ಲಿ ಇರುವವರೆಗೆ ಮೀಸಲಾತಿಯನ್ನು ರದ್ದು ಮಾಡಲು ಸಾಧ್ಯವಿಲ್ಲ. ಇದು ಮೋದಿ ಗ್ಯಾರಂಟಿ ಎಂದು ಹೇಳಿದರು.