ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ 500 ಪ್ರತಿಶತ ಸುಂಕ ವಿಧಿಸುವ ಹೊಸ ನಿರ್ಬಂಧ ಮಸೂದೆ ತರುತ್ತಿದ್ದು ಅದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸಿರು ನಿಶಾನೆ ತೋರಿದ್ದಾರೆ ಎಂದು ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ತಿಳಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಈ ವಿಷಯ ತಿಳಿಸಿರುವ ಅವರು, ಉಕ್ರೇನ್ ನಲ್ಲಿ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪನೆಗೆ ನಡೆಯುತ್ತಿರುವ ಮಾತುಕತೆಗಳ ಹಿನ್ನೆಲೆಯಲ್ಲಿ ಮತ್ತು ವ್ಲಾಡಿಮಿರ್ ಪುಟಿನ್ ಅವರ ಯುದ್ಧ ಯಂತ್ರಕ್ಕೆ ಇಂಧನ ಒದಗಿಸುತ್ತಿರುವ ದೇಶಗಳನ್ನು ಶಿಕ್ಷಿಸಲು ಈ ಕ್ರಮಕ್ಕೆ ಬಂದಿದೆ. ಮುಂದಿನ ವಾರ ದ್ವಿಪಕ್ಷೀಯ ಮತದಾನಕ್ಕೆ ಹಾಕಲಾಗುವುದು ಎಂದು ಅವರು ತಿಳಿಸಿದ್ದಾರೆ.
ಭಾರತ, ಚೀನಾ ಮತ್ತು ಬ್ರೆಜಿಲ್ ದೇಶಗಳನ್ನು ಮುಖ್ಯವಾಗಿ ಗುರಿಯಾಗಿಸಿಕೊಂಡು ಟ್ರಂಪ್ ಸರಕಾರ ಈ ಹೊಸ ಆಮದು ಸುಂಕ ಮಸೂದೆಯನ್ನು ತರುತ್ತಿದೆ. ರಷ್ಯಾದ ಯುದ್ಧದ ಸಿದ್ಧತೆಗಳಿಗೆ ಆರ್ಥಿಕ ಮೂಲವನ್ನು ತಡೆಯುವ ಉದ್ದೇಶದಿಂದ ಈ ಮಸೂದೆಯನ್ನು ಯುಎಸ್ ಕಾಂಗ್ರೆಸ್‌ನಲ್ಲಿ ಮಂಡಿಸಲಾಗಿದ್ದು, ಶೀಘ್ರದಲ್ಲೇ ಯುಎಸ್ ಕಾಂಗ್ರೆಸ್‌ನಲ್ಲಿ ಈ ಮಸೂದೆಯ ಮೇಲೆ ಮತದಾನ ನಡೆಯಲಿದೆ. ಈ ಹೊಸ ಮಸೂದೆ ಯುಎಸ್ ಕಾಂಗ್ರೆಸ್‌ನಲ್ಲಿ ಅಂಗೀಕಾರವಾದರೆ, ಅದು ಭಾರತ, ಚೀನಾ ಮತ್ತು ಬ್ರೆಜಿಲ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ತೈಲದ ಅಷ್ಟೇ ಅಲ್ಲ ರಷ್ಯಾದ ಯುರೇನಿಯಂ ಖರೀದಿಸುವವರಿಗೂ ಈ ಕಠಿಣ ತೆರಿಗೆ ಅನ್ವಯವಾಗಲಿದೆ ಎಂಬುದು ಸ್ಪಷ್ಟವಾಗಿದೆ.
ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುವ ದೇಶಗಳ ವಿರುದ್ಧ ಕಠಿಣ ಆರ್ಥಿಕ ಕ್ರಮಗಳನ್ನು ತೆಗೆದುಕೊಳ್ಳಲು ಈ ಹೊಸ ಮಸೂದೆ ಅಧಿಕಾರ ನೀಡುತ್ತದೆ. ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರಿಸುವ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ 500 ಪ್ರತಿಶತದವರೆಗೆ ತೆರಿಗೆ ವಿಧಿಸಲು ಮಸೂದೆ ಪ್ರಸ್ತಾಪಿಸಿದೆ. ಉಕ್ರೇನ್ ಆಕ್ರಮಣದ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ವಿಧಿಸಲಾಗಿರುವ ಅಮೆರಿಕದ ನಿರ್ಬಂಧಗಳನ್ನು ಮತ್ತಷ್ಟು ಕಠಿಣಗೊಳಿಸುವ ಭಾಗ ಇದಾಗಿದೆ ಎಂದು ಟ್ರಂಪ್ ಆಡಳಿತ ಸ್ಪಷ್ಟಪಡಿಸಿದೆ. ಚೀನಾ, ಭಾರತ ಮತ್ತು ಬ್ರೆಜಿಲ್, ರಷ್ಯಾದ ತೈಲವನ್ನು ಅತಿ ಹೆಚ್ಚು ಖರೀದಿಸುವ ದೇಶಗಳಾಗಿವೆ.
ಯುಎಸ್ ಕಾಂಗ್ರೆಸ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಗ್ರಹಾಂ ಅವರ ರಷ್ಯಾ ಮಂಜೂರಾತಿ ಕಾಯ್ದೆ 2025 ಎಂಬ ಮಸೂದೆಯು ಹಲವಾರು ನಿಬಂಧನೆಗಳನ್ನು ವಿಧಿಸಲು ಪ್ರಯತ್ನಿಸುತ್ತದೆ. ಇದರಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ದಂಡಗಳು ಸೇರಿವೆ. ರಷ್ಯಾದಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ಸರಕು ಮತ್ತು ಸೇವೆಗಳ ಮೇಲಿನ ಸುಂಕದ ದರವನ್ನು ಸರಕು ಮತ್ತು ಸೇವೆಗಳ ಮೌಲ್ಯಕ್ಕೆ ಹೋಲಿಸಿದರೆ ಕನಿಷ್ಠ ಶೇಕಡಾ 500ಕ್ಕೆ ಹೆಚ್ಚಿಸುವುದು ಸೇರಿದೆ.
ನಿನ್ನೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಯುಎಸ್ ನಿಯೋಗದ ಸದಸ್ಯರನ್ನು ಭೇಟಿಯಾಗಿದ್ದರು. ರಷ್ಯಾ-ಉಕ್ರೇನ್ ನಡುವಿನ ಸಂಘರ್ಷವನ್ನು ಕೊನೆಗೊಳಿಸುವ ರಾಜತಾಂತ್ರಿಕ ವಿಧಾನದ ಬಗ್ಗೆ ಚರ್ಚಿಸಿದ್ದರು.
ಇದಕ್ಕೂ ಮೊದಲು, ರಷ್ಯಾದ ತೈಲವನ್ನು ಖರೀದಿಸಲು ಭಾರತದ ಮೇಲೆ ವಿಧಿಸಲಾಗಿರುವ ಹೆಚ್ಚಿನ ಸುಂಕಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅತೃಪ್ತರಾಗಿದ್ದಾರೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದರು.


