ನವದೆಹಲಿ, ಫೆಬ್ರುವರಿ 10: ಏಟಿಗೆ ಏಟು ಎನ್ನುವ ನೀತಿಗೆ ಕಟ್ಟುಬಿದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ಉಕ್ಕು ಮತ್ತು ಅಲೂಮಿನಿಯಮ್ ಆಮದುಗಳ ಮೇಲೆ ಶೇ. 25 ಸುಂಕ ವಿಧಿಸುತ್ತಿರುವುದಾಗಿ ಹೇಳಿದ್ದಾರೆ.
ಈಗ ಇರುವ ಸುಂಕಗಳ ಜೊತೆಗೆ ಹೆಚ್ಚುವರಿಯಾಗಿ ಶೇ. 25ರಷ್ಟು ಆಮದು ಸುಂಕ ಹಾಕಲಾಗುತ್ತದಾ ಎಂಬುದು ಸ್ಪಷ್ಟವಾಗಿಲ್ಲ. ‘ಅಮೆರಿಕಕ್ಕೆ ಬರುತ್ತಿರುವ ಯಾವುದೇ ಉಕ್ಕಿಗೆ ಶೇ. 25ರಷ್ಟು ಆಮದು ಸುಂಕ ತೆರಬೇಕಾಗುತ್ತದೆ’ ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಟ್ರಂಪ್ ತಿಳಿಸಿದ್ದಾರೆ.
ಬೇರೆ ದೇಶಗಳು ಅಮೆರಿಕದ ಉತ್ಪನ್ನಗಳ ಮೇಲೆ ಎಷ್ಟು ತೆರಿಗೆ ಹಾಕುತ್ತವೋ, ತಾವೂ ಕೂಡ ಆ ದೇಶಗಳ ಉತ್ಪನ್ನಗಳ ಮೇಲೆ ಅಷ್ಟೇ ತೆರಿಗೆ ಹಾಕುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳುತ್ತಾ ಬಂದಿದ್ದಾರೆ. ನಾಳೆ ಅಥವಾ ನಾಳಿದ್ದು (ಫೆ. 12) ಅಮೆರಿಕ ಅಧ್ಯಕ್ಷರು ಪ್ರತ್ಯೇಕ ಸುದ್ದಿಗೋಷ್ಠಿ ಕರೆದು ಆಮದು ಸುಂಕಗಳ ಕುರಿತು ಮಾತನಾಡಲಿದ್ದಾರೆ. 2017ರಲ್ಲಿ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾದಾಗಲೂ ಡೊನಾಲ್ಡ್ ಟ್ರಂಪ್ ಅವರು ಆಮದು ಸುಂಕ ವಿಧಿಸುವ ನೀತಿ ಅನುಸರಿಸಿದ್ದರು.