ನ್ಯೂಯಾರ್ಕ್: ಅಮೆರಿಕದ ಸರಕುಗಳ ಮೇಲೆ ಭಾರತ ಮತ್ತು ಇತರ ದೇಶಗಳು ವಿಧಿಸುತ್ತಿರುವ ಹೆಚ್ಚಿನ ಸುಂಕದ ವಿರುದ್ಧ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪದೇ ಪದೇ ಟೀಕಿಸುತ್ತಿದ್ದಾರೆ. ಇದೀಗ ಅವರು ಇಂದು (ಏಪ್ರಿಲ್ 2ರಿಂದ) ಪ್ರತಿ ಸುಂಕವನ್ನು ಜಾರಿಗೆ ತರಲು ಯೋಚಿಸುತ್ತಿದ್ದಾರೆ.
ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಭಾರತ ಶೇ.100 ರಷ್ಟು ಸುಂಕ ವಿಧಿಸುವ ಹಾಗೇ ಇತರೆ ದೇಶಗಳು ವಿಧಿಸುತ್ತಿರುವ ಹೆಚ್ಚಿನ ಸುಂಕಗಳ ಕುರಿತು ಮಾತನಾಡಿರುವ ಶ್ವೇತಭವನ ಅಧಿಕಾರಿ, ಆ ರಾಷ್ಟ್ರಗಳಿಗೆ ಸರಕು ರಫ್ತು ಮಾಡುವುದು ಅಸಾಧ್ಯವಾಗಿದೆ ಎಂದಿದ್ದಾರೆ.
ಈ ಕುರಿತು ಮಾತನಾಡಿರುವ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್, “ಇದು ದುರದೃಷ್ಟಕರವಾಗಿದ್ದು, ಈ ದೇಶಗಳು ನಮ್ಮ ಮೇಲೆ ದೀರ್ಘಕಾಲದಿಂದ ಹೆಚ್ಚು ಒತ್ತಡ ಹೇರುತ್ತಿದ್ದು, ಅವರು ಅಮೆರಿಕನ್ ಕಾರ್ಮಿಕರ ಬಗ್ಗೆ ತಿರಸ್ಕಾರವನ್ನು ಸ್ಪಷ್ಟಪಡಿಸಿದ್ದಾರೆ. ಈ ನ್ಯಾಯಸಮ್ಮತವಲ್ಲದ ವ್ಯಾಪಾರಿ ನೀತಿಯನ್ನು ಗಮನಿಸಿದಲ್ಲಿ, ಅಮೆರಿಕದ ಡೈರಿ ಉತ್ಪನ್ನಗಳ ಮೇಲೆ ಯುರೋಪಿಯನ್ ಒಕ್ಕೂಟ ಶೇ.50ರಷ್ಟು ಮತ್ತು ಅಮೆರಿಕದ ಅಕ್ಕಿಯ ಮೇಲೆ ಜಪಾನ್ ಶೇ.700 ರಷ್ಟು ಸುಂಕ ವಿಧಿಸಿದೆ. ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಭಾರತ ಶೇ.100ರಷ್ಟು ಹಾಗೂ ಅಮೆರಿಕದ ಬೆಣ್ಣೆ ಮತ್ತು ಚೀಸ್ ಮೇಲೆ ಕೆನಡಾ ಶೇ.300 ಸುಂಕ ವಿಧಿಸಿದೆ” ಎಂದರು.
ಇದರಿಂದಾಗಿ ಅಮೆರಿಕದ ಉತ್ಪನ್ನಗಳನ್ನು ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳುವುದು ಅಸಾಧ್ಯವಾಗಿದೆ. ಕಳೆದ ಹಲವು ದಶಕಗಳಿಂದ ಉದ್ಯಮದಿಂದ ಅಮೆರಿಕವನ್ನು ಅವರು ಹೊರಗಿಟ್ಟಿದ್ದಾರೆ ಎಂದು ಟೀಕಿಸಿದರು.
ಹಲವು ದೇಶಗಳು ಅಮೆರಿಕದ ಉತ್ಪನ್ನಗಳಿಗೆ ವಿಧಿಸಿರುವ ಸುಂಕವನ್ನು ತಿಳಿಸಿದ ಲೀವಿಟ್, ಭಾರತ ವಿಧಿಸುತ್ತಿರುವ ಸುಂಕದ ಕುರಿತು ಒತ್ತಿ ಹೇಳಿದರು. ಇದು ಪ್ರತಿ ಸುಂಕ ವಿಧಿಸುವ ಸಮಯವಾಗಿದ್ದು, ಇದು ಅಮೆರಿಕ ಅಧ್ಯಕ್ಷರಿಂದ ಐತಿಹಾಸಿಕ ಬದಲಾವಣೆ ಮಾಡುವ ಸಮಯವಾಗಿದೆ. ಈ ಮೂಲಕ ಅಮೆರಿಕದ ಜನರಿಗೆ ಸರಿಯಾಗಿರುವ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಬುಧವಾರ ನಿರ್ಧಾರ ಮಾಡಲಾಗುವುದು ಎಂದರು.
ಈ ತಿಂಗಳ ಆರಂಭದಲ್ಲಿ ಕೂಡ ಟ್ರಂಪ್, ಸದ್ಯದ ಸುಂಕವೂ ತಾತ್ಕಾಲಿಕವಾಗಿದ್ದು, ಸಣ್ಣದಾಗಿದೆ. ಆದರೆ, ಪ್ರಮುಖ ಸುಂಕವು ಪ್ರತಿಸುಂಕ ವಿಧಿಸುವಿಕೆಯಾಗಿದ್ದು, ಇದು ಏಪ್ರಿಲ್ 2ರಿಂದ ಆರಂಭವಾಗಲಿದ್ದು, ಇದು ನಮ್ಮ ದೇಶಕ್ಕೆ ದೊಡ್ಡ ಬದಲಾವಣೆ ತರುತ್ತದೆ ಎಂದಿದ್ದರು.