ಬೆಂಗಳೂರು,09: ಅತೀ ವೇಗದ ಚಾಲನೆಯಿಂದಾಗಿ ಚಿಕ್ಕಮಗಳೂರಿನಲ್ಲಿ ನಡೆದಿದ್ದ ಅಪಘಾತದಲ್ಲಿ ಕಾರು ಚಾಲಕ ಸಾವು ಮತ್ತು ಮೂವರು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಬ್ಯುಲೆನ್ಸ್ ಚಾಲಕನ ಆರು ತಿಂಗಳ ಶಿಕ್ಷೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಮೂಡಿಗೆರೆ ತಾಲೂಕಿನ ನಿಡಿವಾಲೆ ಗ್ರಾಮದ ಎಸ್.ಸಂತೋಷ್ ಎಂಬಾತನಿಗೆ ಸೆಷನ್ಸ್ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ದೃಢಪಡಿಸಿದ ಹೈಕೋರ್ಟ್, ಅಪಘಾತವು ಆಂಬ್ಯುಲೆನ್ಸ್ ಚಾಲನೆಯ ಅತೀ ವೇಗವನ್ನು ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಇಂತಹ ಪ್ರಕರಣಗಳಲ್ಲಿ ನಾಮಮಾತ್ರದ ಶಿಕ್ಷೆ ಅಥವಾ ಕೆಲವು ನೂರು ರೂಪಾಯಿಗಳ ದಂಡ ವಿಧಿಸಿದರೆ. ಅದು ಸಮಾಜಕ್ಕೆ ಮತ್ತು ಅಪಘಾತದ ಸಂತ್ರಸ್ತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅಲ್ಲದೆ ಇದು ಸಂಚಾರ ನಿಯಮಗಳು ಅಥವಾ ಮಾನವ ಪ್ರಾಣದ ಬಗ್ಗೆ ಕಾಳಜಿ ವಹಿಸದೆ ತಮ್ಮ ವಾಹನಗಳನ್ನು ದುಡುಕಿನ ರೀತಿಯಲ್ಲಿ ಚಾಲಕರು ಓಡಿಸಲು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಹೈಕೋರ್ಟ್ ನ ನ್ಯಾಯಮೂರ್ತಿ ಉಮೇಶ್ ಎಂ ಅಡಿಗ ಹೇಳಿದ್ದಾರೆ.