ಪಠ್ಯದ ಜೊತೆಯಲ್ಲಿ ಕೌಶಲ್ಯವೂ ಅಗತ್ಯವಿದೆ : ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ 

Ravi Talawar
ಪಠ್ಯದ ಜೊತೆಯಲ್ಲಿ ಕೌಶಲ್ಯವೂ ಅಗತ್ಯವಿದೆ : ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ 
WhatsApp Group Join Now
Telegram Group Join Now
ಬಳ್ಳಾರಿ, ಅ. 16: ಇಂದಿನ ವಿದ್ಯಾರ್ಥಿಗಳಿಗೆ ಪಠ್ಯದ ಕಲಿಕೆಯ ಜೊತೆಯಲ್ಲಿ ಕೌಶಲ್ಯವನ್ನು ಕಲಿಸುವ ಅಗತ್ಯವಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ನೂತನವಾಗಿ ಪ್ರಾರಂಭಿಸಿರುವ `ಇಂಕ್ಯುಬೇಷನ್ ಹಾಗೂ ಜಾಬ್ ಪೋರ್ಟಲ್’ ಅನ್ನು ಬುಧವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಡಿಗ್ರಿಗಳು ಸಾಲುತ್ತಿಲ್ಲ. ಕಾರಣ ಪಠ್ಯದ ಜೊತೆಯಲ್ಲಿ ಕೌಶಲ್ಯ, ಜ್ಞಾನ, ಸಂವಹನ ಮತ್ತು ಸಾಮಾನ್ಯ ಜ್ಞಾನವೂ ಪ್ರತಿಯೊಬ್ಬರಿಗೆ ಅಗತ್ಯ. ಈ ನಿಟ್ಟಿನಲ್ಲಿ ಎಐಸಿಟಿಸಿಯ ಜೊತೆಯಲ್ಲಿ ಸರ್ಕಾರ `ಕಲಿಕೆಯ ಜೊತೆಯಲ್ಲಿ ಕೌಶಲ್ಯ’ಕ್ಕೆ ಆದ್ಯತೆ ನೀಡುವ ಪಠ್ಯವನ್ನು ರಚಿಸಲು ಕೋರಿದೆ ಎಂದರು.
ಇದು `ಆವಿಷ್ಕಾರಗಳ ಯುಗ’. ಹೊಸ ಆವಿಷ್ಕಾರಗಳಿಗೆ – ಹೊಸ ತಂತ್ರಜ್ಞಾನಗಳಿಗೆ ಪ್ರತಿಯೊಂದು ಕ್ಷೇತ್ರ, ಪ್ರತಿಯೊಬ್ಬರೂ ಕೌಶಲ್ಯವಂತರಾಗಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಉದ್ಯೋಗಮೇಳಗಳಲ್ಲಿ ನೋಂದಣಿ ಆಗುವವರಿಗೆ ಅಗತ್ಯವಿರುವ ಕೌಶಲ್ಯ, ಸಂವಹನ, ಜ್ಞಾನ ಇನ್ನಿತರೆಗಳ ಜೊತೆಯಲ್ಲಿ ಎಐ-ಮೆಷಿನ್ ಲರ್ನಿಂಗ್ ತಂತ್ರಜ್ಞಾನದ ಬಳಕೆಯ ಜ್ಞಾನವನ್ನು ನೀಡಲಾಗುತ್ತಿದೆ ಎಂದರು.
ಎಫ್‍ಕೆಸಿಸಿಐನ ಅಧ್ಯಕ್ಷೆ ಉಮಾರೆಡ್ಡಿ ಅವರು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಾಬ್‍ಪೋರ್ಟಲ್ ಉದ್ಘಾಟಿಸಿ, ಸ್ಕಿಲ್ ಡೆವಲಪ್‍ಮೆಂಟ್ ಮತ್ತು ಇಂಕ್ಯುಬೇಷನ್ ಸೆಂಟರ್ ಆಧುನಿಕ ಡಿಟಿಟಲ್ ತಂತ್ರಜ್ಞಾನವನ್ನು ಹೊಂದಿದ್ದು, ಉದ್ಯಮಶೀಲತೆಯ ಕೇಂದ್ರವಾಗಿದೆ. ಎಫ್‍ಕೆಸಿಸಿಐ ಬಿಡಿಸಿಸಿಐ ಜೊತೆ ಸ್ಟಾರ್ಟ್‍ಅಪ್ ಮಾರ್ಗದರ್ಶನ, ತರಬೇತಿ ಮತ್ತು ಹೂಡಿಕೆಯ ಸಂಪರ್ಕ ನೀಡಲಿದೆ. ಬಿಡಿಸಿಸಿಐ ಹೊಸ ಅವಕಾಶಗಳನ್ನು ನೀಡಲಿ, ಕರ್ನಾಟಕದ ಪ್ರಗತಿಗೆ ಕೈಜೋಡಿಸಲಿ ಎಂದು ಹಾರೈಸಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿ, ಬಿಡಿಸಿಸಿಐನ ಉದ್ದೇಶ ಹಾಗೂ ಗುರಿಗಳು ಮತ್ತು ನಿಸ್ವಾರ್ಥ ಜನಸೇವೆಗಳನ್ನು ವಿವರಿಸಿ, ಇಂಕ್ಯುಬೇಷನ್ ಸೆಂಟರ್ ಯುವಶಕ್ತಿಗೆ – ನವ ಉದ್ಯಮಿಗಳಿಗೆ ಆಶಾಕಿರಣವಾಗಿ ಸೇವೆ ಸಲ್ಲಿಸುವ ಜವಾಬ್ದಾರಿಗಳನ್ನು ನಿರ್ವಹಿಸಲಿದೆ. ಇಂಕ್ಯುಬೇಷನ್ ಸೆಂಟರ್ ಮುಂಬೈನ ವಿಕಸಿತ ಮೇನೇಜ್‍ಮೆಂಟ್ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ಮತ್ತು ಲಾರ್ವನ್ ಹೋಲ್ಡಿಂಗ್ ಜೊತೆಯ ಒಪ್ಪಂದ ಮಾಡಿಕೊಂಡಿದ್ದು, ಉದ್ಯಮಿಗಳಿಗೆ ಬಂಡವಾಳ ಮತ್ತು ಜ್ಞಾನದ ಮಾರ್ಗದರ್ಶನ ನೀಡಲಿದೆ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ ಅವರು, ಜಾಬ್ ಪೋರ್ಟಲ್ ಕುರಿತು ಸಮಗ್ರ ಮಾಹಿತಿ ನೀಡಿ, ಉದ್ಯಮಿಗಳು ಮತ್ತು ಉದ್ಯೋಗಾಸಕ್ತರು ಈ ಪೋರ್ಟಲ್‍ನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮೇಯರ್ ಮುಲ್ಲಂಗಿ ನಂದೀಶ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಬಿ.ಮಹಾರುದ್ರಗೌಡರು, ಮಾಜಿ ಅಧ್ಯಕ್ಷರಾದ ಸಿ. ಶ್ರೀನಿವಾಸರಾವ್, ಹಿರಿಯ ಉಪಾಧ್ಯಕ್ಷರಾದ ಅವ್ವಾರು ಮಂಜುನಾಥ, ಖಜಾಂಚಿಗಾಳ ಪಿ. ಪಾಲಣ್ಣ ವೇದಿಕೆಯಲ್ಲಿದ್ದರು.
WhatsApp Group Join Now
Telegram Group Join Now
Share This Article