ಮುಂಬೈ: ಏರ್ ಇಂಡಿಯಾ ನವದೆಹಲಿ – ನೆವಾರ್ಕ್ ವಿಮಾನದಲ್ಲಿ ಸಂಚಾರ ಮಾಡಿದ ಬಿಸಿನೆಸ್ ಕ್ಲಾಸ್ ಪ್ರಯಾಣಿಕನೊಬ್ಬ, ”ವಿಮಾನಯಾನ ಸಂಸ್ಥೆಯು ತನಗೆ ಬೇಯಿಸದ ಆಹಾರವನ್ನು ನೀಡಿತ್ತು ಮತ್ತು ಸೀಟುಗಳು ಕೊಳಕಾಗಿದ್ದವು. ಪ್ರಯಾಣ ದುಃಸ್ವಪ್ನಕ್ಕಿಂತ ಕಡಿಮೆಯಿಲ್ಲ” ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ ಪ್ರಯಾಣಿಕ ವಿನೀತ್ ಕೆ ಅವರು, ಗಲ್ಫ್ ಕ್ಯಾರಿಯರ್ ಎತಿಹಾದ್ನೊಂದಿಗೆ ಅಗ್ಗದ ದರದಲ್ಲಿ ಟಿಕೆಟ್ ಪಡೆದು ಪ್ರಯಾಣಿಸುವ ಸೌಲಭ್ಯ ಹೊಂದಿದ್ದರೂ ನಾನು ಅಮೆರಿಕಕ್ಕೆ ತಡೆರಹಿತ ಸೇವೆಯನ್ನು ನಿರ್ವಹಿಸುವ ಕಾರಣ ಏರ್ ಇಂಡಿಯಾವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನಿನ್ನೆಯ ಫ್ಲೈಟ್ ದುಃಸ್ವಪ್ನಕ್ಕಿಂತ ಕಡಿಮೆಯೇನಿಲ್ಲ. ಬುಕ್ ಮಾಡಿದ್ದು ಬಿಸಿನೆಸ್ ಕ್ಲಾಸ್ (ಆಫೀಸ್ ಟ್ರಿಪ್). ಆಸನಗಳು ಸ್ವಚ್ಛವಾಗಿಲ್ಲ, ಸವೆದು ಹೋಗಿವೆ ಮತ್ತು 35ರಲ್ಲಿ ಕನಿಷ್ಠ 5 ಆಸನಗಳು ಕಾರ್ಯನಿರ್ವಹಿಸುತ್ತಿಲ್ಲ” ಎಂದು ಕಿಡಿಕಾರಿದ್ದಾರೆ.
”25 ನಿಮಿಷಗಳ ವಿಳಂಬದ ನಂತರ ಫ್ಲೈಟ್ ಟೇಕ್ ಆಫ್ ಆಗಿದೆ” ಎಂದು ಆರೋಪಿಸಿದ ವಿನೀತ್ ಅವರು, “ಟೇಕ್ ಆಫ್ ಆದ 30 ನಿಮಿಷಗಳ ನಂತರ ನಾನು ಮಲಗಲು ಬಯಸಿದ್ದೆ (3.30 AM) ಮತ್ತು ನನ್ನ ಸೀಟ್ ಕೆಲಸ ಮಾಡದ ಕಾರಣ, ಸೀಟ್ ಫ್ಲಾಟ್ ಬೆಡ್ಗೆ ಹೋಗುವುದಿಲ್ಲ ಎಂದು ಅರಿತುಕೊಂಡೆ” ಎಂದು ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಏರ್ ಇಂಡಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
“ಕೆಲವು ವರ್ಷಗಳ ಕಾಲ ಎಮಿರೇಟ್ಸ್ ವಿಮಾನದಲ್ಲಿ ಹಾರಾಟ ನಡೆಸಿದ ನಂತರ, ನಾನು ಇತ್ತೀಚೆಗೆ ಏರ್ ಇಂಡಿಯಾ ಆಯ್ಕೆ ಮಾಡಿಕೊಂಡೆ ಏಕೆಂದರೆ ಅವರು ನ್ಯೂಯಾರ್ಕ್, ಚಿಕಾಗೋ ಮತ್ತು ಲಂಡನ್ಗೆ ನೇರ ವಿಮಾನಗಳನ್ನು ಒದಗಿಸುತ್ತಾರೆ” ಎಂದ ಪ್ರಯಾಣಿಕ, ಸೀಟು ಬದಲಾವಣೆಗೆ ಸಿಬ್ಬಂದಿಗೆ ವಿನಂತಿಸಿದರು ಮತ್ತು ಇನ್ನೊಂದು ಸೀಟಿಗೆ ಸ್ಥಳಾಂತರಿಸಲಾಯಿತು. ಬಳಿಕ ನನಗೆ ಕೆಲವು ಗಂಟೆಗಳ ನಂತರ ಎಚ್ಚರವಾಯಿತು, ಆಹಾರವನ್ನು ಬಡಿಸಲಾಯಿತು. ಆದ್ರೆ ಅದನ್ನು ಸರಿಯಾಗಿ ಬೇಯಿಸಿರಲಿಲ್ಲ, ಹಣ್ಣುಗಳು ಹಳಸಿದ್ದರಿಂದ ವಿಮಾನದಲ್ಲಿದ್ದ ಎಲ್ಲರೂ ವಾಪಸ್ ನೀಡಿದರು” ಅವರು ಪೋಸ್ಟ್ನಲ್ಲಿ ಆರೋಪಿಸಿದ್ದಾರೆ.
“ಟಿವಿ/ಸ್ಕ್ರೀನ್ ಕೆಲಸ ಮಾಡಲಿಲ್ಲ. ನಾನು ಎಷ್ಟೇ ಪ್ರಯತ್ನಿಸಿದರೂ ಅದರಲ್ಲಿ ದೋಷ ತೋರಿಸಿತು. ಕೆಟ್ಟ ಆಹಾರ, ಹಳಸಿದ ಹಣ್ಣುಗಳು, ಕೊಳಕು ಸೀಟ್ ಕವರ್, ಕೆಲಸ ಮಾಡದ ಟಿವಿ ಎಲ್ಲಾ ಸೇರಿ ₹500000 (ರೌಂಡ್ ಟ್ರಿಪ್), ನನ್ನ ಲಗೇಜ್ಗೆ ಹಾನಿಯಾಗಿದೆ” ಎಂದು ವಿನೀತ್ ಕೆ ತಿಳಿಸಿದ್ದಾರೆ. ಈ ಎಲ್ಲ ಆರೋಪಗಳ ಬಗ್ಗೆ ಏರ್ ಇಂಡಿಯಾ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.