ಬೆಂಗಳೂರು: ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ 2022-27ರಂತೆ ಪರೀಕ್ಷಾ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಒಂದು ಲಕ್ಷ ಮಂದಿಗೆ ತರಬೇತಿ ನೀಡುವ ವ್ಯಾಪಕ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿರುವ ಎರಡು ದಿನಗಳ ರಕ್ಷಣಾ ಮತ್ತು ಏರೋಸ್ಪೇಸ್ಗೆ ಸಂಬಂಧಿಸಿದ 13ನೇ ಸ್ಟ್ರಾಟೆಜಿಕ್ ಎಲೆಕ್ಟ್ರಾನಿಕ್ಸ್ ಶೃಂಗಸಭೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, 60,000 ಕೋಟಿ ರೂ. ಹೂಡಿಕೆಯ ಮೂಲಕ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ 70,000 ಉದ್ಯೋಗ ಸೃಷ್ಟಿ ಮಾಡುವ ಗುರಿ ಇದೆ ಎಂದರು.
ಮೂಲಸೌಕರ್ಯದಲ್ಲಿ ಕೃತಕ ಬುದ್ಧಿಮತ್ತೆ (ಎಐ), ಯಂತ್ರ ಕಲಿಕೆ ಮತ್ತು ಸುಧಾರಿತ ಸಾಮಗ್ರಿಗಳಲ್ಲಿ ಸಂಶೋಧನೆಗೆ ಆದ್ಯತೆ ನೀಡಲಾಗುತ್ತದೆ. ವ್ಯವಹಾರ ಸುಲಭಗೊಳಿಸಲು 500 ಕೋಟಿ ರೂ ಪ್ರೋತ್ಸಾಹಕಗಳೊಂದಿಗೆ ಇದು ನಿಯಮಾವಳಿಗಳನ್ನು ಸರಳೀಕರಿಸುತ್ತದೆ. 200ಕ್ಕೂ ಹೆಚ್ಚು ಪಾಲುದಾರಿಕೆಗಳು ಸಹಯೋಗವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸುಸ್ಥಿರತೆಯನ್ನು ಉತ್ತೇಜಿಸುವ ಮೂಲಕ 2027ರ ವೇಳೆಗೆ ಸ್ಥಳೀಯ ತಂತ್ರಜ್ಞಾನಗಳು ಮತ್ತು ಹಸಿರು ಅಭ್ಯಾಸಗಳ ಮೂಲಕ ಶೇ.30ರಷ್ಟು ಇಂಗಾಲದ ಕಡಿತವನ್ನು ಗುರಿಯಾಗಿರಿಸಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ, ಏರೋಸ್ಪೇಸ್ ಮತ್ತು ಡಿಫೆನ್ಸ್ ಇಕೋಸಿಸ್ಟಮ್‌ನ ಜಾಗದಲ್ಲಿ ವೇಗವರ್ಧಕ ಬೆಂಬಲವನ್ನು ಹೆಚ್ಚಿಸಲು ಸರ್ಕಾರ ರಾಜ್ಯದಾದ್ಯಂತ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ಸಚಿವರು ಹೇಳಿದರು.