ಬಳ್ಳಾರಿ,ಸೆ.೦8. ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಸ್ಥಾಪನೆಗೆ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಬಳಸಲಾಗುವುದು ಎಂದು ರಾಜ್ಯದ ಉಪಮುಖ್ಯಮಂತ್ರಿಗಳು ಕಾರ್ಯಕ್ರಮವೊಂದರಲ್ಲಿ ಹೇಳಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಮುಖ್ಯಮಂತ್ರಿಗಳು ತಮ್ಮ ಈ ಪ್ರಸ್ತಾಪನೆಯನ್ನು ಕೈಬಿಡಬೇಕೆಂದು ರಾಜ್ಯದ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ ಎಂದು ಎಐಡಿಎಸ್‌ಓ ಬಳ್ಳಾರಿ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದ ಸರ್ಕಾರಿ ಶಾಲೆಗಳ ಪರಿಸ್ಥಿತಿ ಅತ್ಯಂತ ದಯನೀಯವಾಗಿದೆ. ಈ ಬಾರಿ ಮಳೆಗೆ ಶಾಲಾ ಕೋಠಡಿಗಳು ಸೋರುತ್ತಿದೆ. ಅನೇಕ ಶಾಲೆಗಳ ಮೇಲ್ಛಾವಣಿಗಳು ಕುಸಿಯುವ ಹಂತದಲ್ಲಿದೆ. ಪೀಠೋಪಕರಣಗಳು, ಶೌಚಾಲಯಗಳು ಇಲ್ಲದೇ ಕಲಿಕೆ ಕುಂಟಿತಗೊಳ್ಳುತ್ತಿದೆ. ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕಾದ ಅವಶ್ಯಕತೆ ತೀವ್ರವಾಗಿದೆ. ಸರ್ಕಾರವು ತನ್ನ ಜನರಿಗೆ ಶಿಕ್ಷಣ ನೀಡುವ ಪ್ರಾಥಮಿಕ ಜವಾಬ್ದಾರಿಯನ್ನು ನೆರವೇರಿಸಬೇಕೆಂಬುದು ರಾಜ್ಯದ ಜನರ ಆಗ್ರಹವಾಗಿದೆ.
ಜನರು ನೀಡುವ ತೆರಿಗೆ ಹಣದಲ್ಲಿ ಅಭಿವೃದ್ಧಿಪಡಿಸಬೇಕಾದ, ಜನಗಳ ಸ್ವತ್ತಾದ ಈ ಶಾಲೆಗಳನ್ನು ಈಗ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಮಡಿಲಿಗಿಡಲು ಹೊರಟಿದೆ. ಮಹಾನ್ ವ್ಯಕ್ತಿಗಳ ಹೆಸರುಗಳನ್ನು ಇಡುವ ಬದಲು ಈ ಕಾರ್ಪೋರೇಟ್ ಕಂಪನಿಗಳ ಹೆಸರು ಶಾಲೆಗಳಿಗೆ ಇಡುವ ಪ್ರಸ್ತಾಪವನ್ನು ಮಾಡಿರುವುದು, ಸರ್ಕಾರ ದಲ್ಲಾಳಿ ಕೆಲಸಕ್ಕೆ ಇಳಿದಿದೆಯೇ ಎಂಬ ಪ್ರಶ್ನೆ ಮೂಡಿಸುತ್ತಿದೆ. ಕಾರ್ಪೋರೇಟ್ ಕಂಪನಿಗಳ ಭಿಕ್ಷಾ ಹಣದಲ್ಲಿ ನಮ್ಮ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಬದಲು ನಮ್ಮ ಹಕ್ಕಿನ ತೆರಿಗೆ ಹಣದಲ್ಲಿ ಶಾಲೆಗಳನ್ನು ನಿರ್ಮಿಸಿ ಅಭಿವೃದ್ಧಿ ಪಡಿಸಲಿ. ಇನ್ನು ಕಂಪನಿಗಳ ಮೇಲೆ ತೆರಿಗೆ ಹೆಚ್ಚಿಸಿ ಅವರಿಂದ ನ್ಯಾಯಯುತವಾಗಿ ಹಣ ವಸೂಲಿ ಮಾಡಲಿ ಎಂದು ಒತ್ತಾಯಿಸಿದೆ ಎಂದು ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.