ಗದಗ, 9 : ಅಧಿವೇಶನದಲ್ಲಿ ಮಾತನಾಡಿದ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪ ರವರು, ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ, ಈ ರೀತಿಯ ಅಪಾದನೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿರುವ ಅಸತ್ಯದಿಂದ ಕೂಡಿದ ವಾದ ಎಂದೂ ಸಹ ಹೇಳಿದ್ದಾರೆ. ಆದರೆ, ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ದಿನಾಂಕ 15, ಅಕ್ಟೋಬರ್ ಹೊರಡಿಸಿದ ಸುತ್ತೋಲೆಯಲ್ಲಿ KPS Magnet ಶಾಲೆಗಳೊಂದಿಗೆ ಸುತ್ತಲಿನ ಕಡಿಮೆ ದಾಖಲಾತಿಯ ಶಾಲೆಗಳನ್ನು ವಿಲೀನಗೊಳಿಸಬೇಕು ಎಂದು ಆದೇಶಿಸಿದೆ. ಅಂತೆಯೇ, KPS ಶಾಲೆಯನ್ನಾಗಿ ಉನ್ನತೀಕರಿಸುತ್ತಿರುವ ಹಲವು ಶಾಲೆಗಳಿಗೆ ಸುತ್ತಲಿನ ಶಾಲೆಗಳನ್ನು ವಿಲೀನಗೊಳಿಸಿಸಬೇಕು ಎಂಬ ಆದೇಶವನ್ನು ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದ ಹಲವು ಶಾಲೆಗಳಿಗೆ ನೀಡಲಾಗಿದೆ. ಅಧಿವೇಶನದಲ್ಲಿ ಸಚಿವರೇ ಹೇಳಿದಂತೆ, ಗ್ರಾಮ ಪಂಚಾಯಿತಿಗೊಂದರಂತೆ KPS Magnet ಶಾಲೆಗಳನ್ನು ತೆರೆಯಲಾಗುತ್ತದೆ, ಅಂದರೆ ತಮ್ಮದೇ ಇಲಾಖೆಯ ಆದೇಶದಂತೆ ಸರ್ಕಾರ ಮುಂದುವರೆಯುತ್ತಿದೆ ಎಂದು ಎ ಐ ಡಿ ಎಸ್ ಓ ಎಂ ಜಿಲ್ಲಾ ಸಂಚಾಲಕಿಶಾಂತಿ ಆರೊಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗ ಮೂಡುವ ಪ್ರಶ್ನೆಯೆಂದರೆ, ಸರ್ಕಾರದ ಆದೇಶಗಳು ಹೇಳುವುದೇ ಒಂದು, ಮಂತ್ರಿಗಳ ಹೇಳಿಕೆ ಮತ್ತೊಂದು. ಜನ ಯಾವುದನ್ನು ನಂಬಬೇಕು? ಆದ್ದರಿಂದ, ಕನ್ನಡ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂಬ ಸಚಿವರ ಒಳ್ಳೆಯ ಆಶಯ ನಿಜವಾದಲ್ಲಿ, ಈ ಕೂಡಲೇ ರಾಜ್ಯ ಸರ್ಕಾರ ತನ್ನ ಅಕ್ಟೋಬರ್ 15ರ ಆದೇಶದಲ್ಲಿ ನಮೂದಿಸಿರುವ ವಿಲೀನದ ಅಂಶವನ್ನು ಹಿಂಪಡೆಯಲಿ ಜೊತೆಗೆ ವಿಲೀನದ ಹೆಸರಿನಲ್ಲಿ ಕಡಿಮೆ ದಾಖಲಾತಿಯ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಲಿಖಿತ ಆದೇಶ ಹೊರಡಿಸಲಿ ಎಂದು AIDSO ಆಗ್ರಹಿಸುತ್ತದೆ ಎಂದಿದ್ದಾರೆ.


