ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ

Ravi Talawar
ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ
WhatsApp Group Join Now
Telegram Group Join Now

ಬೆಂಗಳೂರು: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸೌಧದ ಸ್ಪೀಕರ್ ಕೊಠಡಿಯಲ್ಲಿ ಇಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿದ ಅವರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ರಾಜೀನಾಮೆ ಪತ್ರದಲ್ಲೇನಿದೆ: ”ವಿಜಯಪುರ ನಗರ ಶಾಸಕರಾದ ಬಸನಗೌಡ ಆರ್. ಪಾಟೀಲ್ (ಯತ್ನಾಳ್) ರವರು ತಮ್ಮ ವಿಜಯಪುರ ಮತ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ನನ್ನ ವಿರುದ್ಧ ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸವಾಲು ಹಾಕಿದ್ದಾರೆ. ನಾನು ಅವರ ಸವಾಲನ್ನು ಸ್ವೀಕರಿಸಿ, ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಹಾಗಾಗಿ, ನಾನು ಪ್ರತಿನಿಧಿಸುತ್ತಿರುವ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಆದುದರಿಂದ, ಬಸನಗೌಡ ಆರ್. ಪಾಟೀಲ್ (ಯತ್ನಾಳ್) ರವರು ಸವಾಲು ಹಾಕಿರುವಂತೆ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಅವರ ರಾಜೀನಾಮೆ ಅಂಗೀಕಾರವಾದರೆ ಮಾತ್ರ, ದಯಮಾಡಿ ನನ್ನ ರಾಜೀನಾಮೆಯನ್ನೂ ಅಂಗೀಕರಿಸುವಂತೆ ತಮ್ಮಲ್ಲಿ ಕೋರುತ್ತೇನೆ” ಎಂದು ಶಿವಾನಂದ ಪಾಟೀಲ್ ಸ್ಪೀಕರ್ ಅವರನ್ನು ಕೋರಿದ್ದಾರೆ.

ರಾಜೀನಾಮೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಿವಾನಂದ ಪಾಟೀಲ್, ”ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ನಿಂದನೆ ಮಾಡಿದ್ದರು. ನನ್ನ ಪೂರ್ವಜರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ವೈಯಕ್ತಿಕವಾಗಿ ತೇಜೋವಧೆ ಮಾಡಿದ್ದಾರೆ. ಇಂತಹ ಮಾತುಗಳನ್ನು ಸಹಿಸುವುದಕ್ಕೆ ಆಗುವುದಿಲ್ಲ. ಹಾಗಾಗಿ, ಸ್ಪೀಕರ್​​ಗೆ ರಾಜೀನಾಮೆ ಕೊಟ್ಟು ಬಂದಿದ್ದೇನೆ” ಎಂದು ಹೇಳಿದರು.

”ಯತ್ನಾಳ್ ಸವಾಲನ್ನು ಸ್ವೀಕರಿಸಿದ್ದೇನೆ. ಯತ್ನಾಳ್ ಅವರು ರಾಜೀನಾಮೆ ನೀಡಲಿ, ನಾನು ವಿಜಯಪುರದಲ್ಲಿ ಚುನಾವಣೆ ಎದುರಿಸುತ್ತೇನೆ. ಇಲ್ಲವೇ, ನೀವು (ಯತ್ನಾಳ್) ಬಸವನಬಾಗೇವಾಡಿಗೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸಿ” ಎಂದು ಸವಾಲು ಹಾಕಿದರು.

”ನಾನು ಬಸವನಬಾಗೇಡಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದೇನೆ. ನೀವು ರಾಜೀನಾಮೆ ನೀಡಿ ಎಂದು ಅವರು ಶುಕ್ರವಾರದವರೆಗೆ ನನಗೆ ಗಡುವು ಕೊಟ್ಟಿದ್ದರು. ಅದರಂತೆ ನಾನು ಸ್ಪೀಕರ್​​ಗೆ ರಾಜೀನಾಮೆ ನೀಡಿದ್ದೇನೆ. ಯತ್ನಾಳ್ ಅವರಿಗಿಂತ ಮುಂಚೆಯೇ ನನ್ನ ರಾಜೀನಾಮೆ ‌ಪಡೆಯಲು‌ ಮನವಿ ಮಾಡಿದ್ದೇನೆ” ಎಂದರು.

”ನಾನು ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಜೊತೆಗೆ ಮಾತನಾಡಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ. ಯತ್ನಾಳ್​​ಗೆ ಯಾವುದೇ ಗಡುವು ನೀಡಲ್ಲ. ಅವರು ರಾಜೀನಾಮೆ ಕೊಟ್ಟರೆ, ನನ್ನ ರಾಜೀನಾಮೆ ಅಂಗೀಕಾರ ಆಗುತ್ತದೆ. ನಾನು ಈ ಬಗ್ಗೆ ಸಿಎಂ ಗಮನಕ್ಕೆ ತರಲ್ಲ” ಎಂದು ಪ್ರತಿಕ್ರಿಯಿಸಿದರು.

ಸ್ಪೀಕರ್ ಪ್ರತಿಕ್ರಿಯೆ: ”ಸಚಿವ ಶಿವಾನಂದ ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಅವರಿಗೆ ಇನ್ನೊಬ್ಬರು ಶಾಸಕರು ವೈಯಕ್ತಿಕ ಸವಾಲು ಹಾಕಿದ್ದಾರೆ. ಸವಾಲು ಸ್ವೀಕಾರ ಮಾಡಿ ರಾಜೀನಾಮೆ ನೀಡಿದ್ದಾರೆ” ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ”ಸವಾಲು ಹಾಕಿದ್ದವರು ರಾಜೀನಾಮೆ ನೀಡಿದ ಬಳಿಕ ಅಂಗೀಕಾರ ಮಾಡಿ ಅಂದಿದ್ದಾರೆ. ನಾನು ಪರಿಶೀಲನೆ ಮಾಡುತ್ತೇನೆ. ಅವರ ಗೌರವದ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ” ಎಂದರು.

”ಈಗ ರಾಜೀನಾಮೆ ಪತ್ರ ನೀಡಿದ್ದಾರೆ. ಮುಂದೆ ನಾವು ಆಲೋಚನೆ ಮಾಡುತ್ತೇವೆ. ಸಂವಿಧಾನ ಪ್ರಕಾರ ಪರಿಶೀಲನೆ ಮಾಡುತ್ತೇವೆ. ಅವರ ವಿಚಾರವನ್ನು ಲಿಖಿತ ರೂಪದಲ್ಲಿ ಈಗ ಕೊಟ್ಟಿದ್ದಾರೆ. ರಾಜೀನಾಮೆ ಕೊಡುವುದು ಅವರ ಹಕ್ಕು. ಇದು ಸರಿ ಇದೇಯಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ನಿರ್ಣಯ ಮಾಡುತ್ತೇವೆ. ಕಾನೂನು ಪ್ರಕಾರ ನಾವು ನಿರ್ಧಾರ ಮಾಡುತ್ತೇವೆ” ಎಂದು ತಿಳಿಸಿದರು.

WhatsApp Group Join Now
Telegram Group Join Now
Share This Article