ನೇಸರಗಿ: ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಕೃಷಿ ಇಲಾಖೆ, ಬೆಳಗಾವಿ ಹಾಗೂ ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಇವರ ಸಹಯೋಗದಲ್ಲಿ ಎರಡು ದಿನಗಳ ದ್ವೈಮಾಸಿಕ ಕಾರ್ಯಾಗಾರವನ್ನು ದಿನಾಂಕ ೦೧.೦೨.೨೦೨೫ ರಂದು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಾಗಾರವನ್ನು ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷ ಹಾಗೂ ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ಬಿ. ಆರ್. ಪಾಟೀಲ ಉದ್ಘಾಟಿಸಿ ಮಾತನಾಡುತ್ತ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಕೃಷಿ ವಿಜ್ಞಾನ ಕೇಂದ್ರದಲ್ಲಿ ಚರ್ಚಿಸುತ್ತಿತುರುವುದು ತುಂಬಾ ಸಂತೋಷದ ವಿಷಯವಾಗಿದೆ.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರ ಆಶಯದಂತೆ ಮೊಟ್ಟಮೊದಲ ಬಾರಿಗೆ ಕಾರ್ಯಾಗಾರವನ್ನು ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಮತ್ತು ಕೇಂದ್ರದಲ್ಲಿ ರೈತರಿಗೆ ಉತ್ತಮ ಮೂಲ ಸೌಕರ್ಯವನ್ನು ಒದಗಿಸಲಾಗಿದೆ ಹಾಗೂ ಕೇಂದ್ರದ ಶೇ. ೧೦೦ ರಷ್ಟು ಕ್ಷೇತ್ರದಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿ ಕೇಂದ್ರವು ಮಿತ ನೀರಾವರಿಯಲ್ಲಿ ಮಾದರಿಯಾಗಿದೆ. ಈ ದಿಸೆಯಲ್ಲಿ ಮಾನ್ಯ ಡಾ. ಪ್ರಭಾಕರ ಕೋರೆಯವರ ಕೊಡುಗೆ ಅಪಾರವಾಗಿದೆ. ಅಲ್ಲದೆ ಕೇಂದ್ರದಲ್ಲಿ ನುರಿತ ವಿಜ್ಞಾನಿಗಳು ಕೈಗೊಂಡ ಪ್ರಾತ್ಯಕ್ಷಿಕೆ, ತರಬೇತಿ ಹಾಗೂ ವಿವಿಧ ವಿಸ್ತರಣಾ ಚಟುವಟಿಕೆಗಳ ಫಲವಾಗಿ ಕೃಷಿ ವಿಜ್ಞಾನ ಕೇಂದ್ರವು ಉತ್ತಮ ಸಾಧನೆ ಮಾಡಿ ಹೆಸರುವಾಸಿಯಾಗಿದೆ ಎಂದರು. ಇಂತಹ ರೈತಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಕೇಂದ್ರವು ಸದಾ ಸಹಕಾರ ನೀಡುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿಯವರು ಬೆಳಗಾವಿ ಜಿಲ್ಲೆಯ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಕಂಡು ಬರುವ ಸಮಸ್ಯೆಗಳಾದ ತಳಿಗಳು, ಮಣ್ಣು ಫಲವತತ್ತೆ, ಕೀಟ ರೋಗಗಳ ಬಾಧೆ, ಬೆಳೆ ಪರಿವರ್ತನೆ ಇತರ ಬೆಳೆಗಳ ರವದಿ ನಿರ್ವಹಣೆ ಮುಂತಾದ ಸಮಸ್ಯೆಗಳ ಕುರಿತು ಈ ಕಾರ್ಯಾಗಾರದಲ್ಲಿ ಚರ್ಚಿಸಿ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ವತಿಯಿಂದ ನಿರಂತರವಾಗಿ ರೈತರಿಗೆ ಪರಿಹಾರೋಪಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಶ್ರೀ. ಎಸ್. ಎಸ್. ಪಾಟೀಲರವರು ಮಾತನಾಡುತ್ತ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರ ದೇವರಿಗೆ ಅರ್ಪಿಸುವ ಬಿಲ್ವ ಪತ್ರೆಯ ತ್ರಿದಳದಂತೆ ಮೂರು ಕೇಂದ್ರಗಳು ಜೊತೆಗೂಡಿ ಮತ್ತಿಕೊಪ್ಪ ಕೇಂದ್ರದಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಿ ಜಿಲ್ಲೆಯ ರೈತರ ಪ್ರತಿ ಬೆಳೆಯ ಇಳುವರಿಯನ್ನು ಹೆಚ್ಚಿಸಲು ನೂತನ ತಾಂತ್ರಿಕತೆಗಳ ಬಗ್ಗೆ ಚರ್ಚಿಸಿ ರೈತರಿಗೆ ತಾಂತ್ರಿಕ ಮಾಹಿತಿಯನ್ನು ವಿಸ್ತರಿಸಲಾಗುವುದು ಎಂದರು.
ತಾಂತ್ರಿಕ ಅಧಿವೇಶನದಲ್ಲಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಡಾ. ಪಿ. ಎಸ್. ಮತ್ತಿವಾಡೆ, ಡಾ. ಎಸ್. ಎ. ಗದ್ದನಕೇರಿ, ಡಾ. ಎಸ್. ಎಸ್. ನೂಲಿ, ಕೃಷಿ ಇಲಾಖೆಯ ನಿರ್ದೇಶಕರುಗಳಾದ ಎಸ್. ಬಿ. ಕೊಂಗವಾಡ, ಹೆಚ್. ಡಿ. ಕೋಳೇಕರ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಶ್ರೀ. ಎಸ್. ಎಮ್. ವಾರದ, ಶ್ರೀ. ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ, ಶಂಕರಗೌಡ ಪಾಟೀಲ ಹಾಗೂ ತಾಂತ್ರಿಕ ಸಲಹೆಗಾರರಾದ ಡಾ. ಪಿ. ಎಸ್. ಹೂಗಾರ ಭಾಗವಹಿಸಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ತಾಂತ್ರಿಕ ಸಲಹೆಗಳನ್ನು ನೀಡಿದರು. ಕೃಷಿ ಇಲಾಖೆಯ ಶ್ರೀ ಸಿ. ಆಯ್. ಹೂಗಾರ ನಿರೂಪಿಸಿ ವಂದಿಸಿದರು.