ಹೈದರಾಬಾದ್: ಯುದ್ಧಪೀಡಿತ ಗಾಜಾದಲ್ಲಿ 25 ವರ್ಷಗಳ ಬಳಿಕ ಪೋಲಿಯೋ ಪ್ರಕರಣವೊಂದು ಪತ್ತೆಯಾಗಿದೆ. ಗಾಜಾ ನಗರ ದೇರ್ ಅಲ್ ಬಾಲಾಹ್ದಲ್ಲಿ ಲಸಿಕೆ ಪಡೆಯದ 10 ತಿಂಗಳ ಮಗುವಿನಲ್ಲಿ ಸೋಂಕು ದೃಢಪಟ್ಟಿದೆ.
ಮಗುವಿನ ಲಕ್ಷಣಗಳ ಪತ್ತೆ ಬಳಿಕ ಜೋರ್ಡನ್ ರಾಜಧಾನಿ ಅಮ್ಮನ್ನಲ್ಲಿ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಪೋಲಿಯೋ ದೃಢಪಟ್ಟಿದೆ ಎಂದು ಸಚಿವಾಲಯ ತಿಳಿಸಿದೆ. ಮಗುವು ಐದು ವರ್ಷದೊಳಗೆ ಮಾರಣಾಂತಿಕ ಪಾರ್ಶ್ವವಾಯುಗೆ ತುತ್ತಾಗಬಹುದು. ಇದು ಕಲುಷಿತ ನೀರಿನಿಂದ ಹರಡಿದೆ ಎನ್ನಲಾಗಿದೆ. ಈಗಾಗಲೇ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಹೊರತಾಗಿ ಇಡೀ ಜಗತ್ತು ಪೋಲಿಯೋ ಮುಕ್ತವಾಗಿದೆ. ರೋಗ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ.
ಗಾಜಾದಲ್ಲಿ ಪೋಲಿಯೋ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಸ್ರೇಲ್- ಹಮಾಸ್ ನಡುವಿನ ಯುದ್ಧಕ್ಕೆ ಕದನ ವಿರಾಮ ನೀಡಬೇಕು. ಇದರಿಂದ ಸಾವಿರಾರು ಮಕ್ಕಳಿಗೆ ಲಸಿಕೀಕರಣ ನಡೆಸಬಹುದು ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಕರೆ ನೀಡಿದ್ದಾರೆ.
ಗಾಜಾದಲ್ಲಿ ಪೋಲಿಯೋ ವೈರಸ್ ಇನ್ನಷ್ಟು ಹರಡಬಹುದು. ಅಲ್ಲಿನ 6,40,000ಕ್ಕಿಂತ ಹೆಚ್ಚಿನ ಮಕ್ಕಳಿಗೆ ಪೋಲಿಯೋ ಲಸಿಕೆ ಅಭಿಯಾನಕ್ಕೆ ವಿಶ್ವಸಂಸ್ಥೆ ಸಿದ್ಧವಾಗಿದೆ. ಯುದ್ಧದ ಸಂದರ್ಭದಲ್ಲಿ ಈ ಲಸಿಕೆ ಅಭಿಯಾನ ನಡೆಸಲು ಸಾಧ್ಯವಿಲ್ಲ. ಪೋಲಿಯೋ ಲಸಿಕೆ ಆರಂಭಕ್ಕೆ ಶಾಂತಿ ಮತ್ತು ಮಾನವೀಯ ಕದನ ವಿರಾಮ ಅತ್ಯಗತ್ಯ ಎಂದು ಗುಟೆರಸ್ ಆಗ್ರಹಿಸಿದ್ದಾರೆ.