ಬಳ್ಳಾರಿ,ಮಾ.24
ವಚನ ಸಾಹಿತ್ಯ ಕಾಲದಲ್ಲಿಯೇ ಲಿಂಗ ತಾರತಮ್ಯ ವಿರುದ್ಧ ಧ್ವನಿ ಎತ್ತಿದ ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು ಎಂಬುದಾಗಿ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಛಯದ ಹೊಂಗಿರಣ ಸಭಾಂಗಣದಲ್ಲಿ ಸೋಮವಾರ ಆಯೋಜಿದ್ದ ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
11 ನೇ ಶತಮಾನದಲ್ಲಿಯೇ ದೇವರ ದಾಸಿಮಯ್ಯರವರು ವಚನ ಸಾಹಿತ್ಯದ ಮೂಲಕ ಲಿಂಗ ತಾರತಮ್ಯ ಮಾಡುವುದು ತಪ್ಪು ಎಂದು ಪ್ರತಿಪಾದಿಸಿದ್ದರು. ಈ ಕುರಿತು ಶಿವನ ಆರಾಧನೆಯ ಮೂಲಕ ಜನರಿಕೆ ತಿಳಿವಳಿಕೆ ನೀಡುತ್ತಿದ್ದರು. ಹಾಗಾಗಿ ಪ್ರಸ್ತುತ ಸಮಾಜದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಒದಗಿಸಿ ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಎಲ್ಲರು ಸಹಕರಿಸಬೇಕು ಎಂದು ಅಭಿಪ್ರಾಯಪಟ್ಟರು.
ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಮಾತನಾಡಿ, ವಚನಗಳಿಗೆ ಮನಃ ಪರಿವರ್ತನೆ ಮಾಡುವ ಶಕ್ತಿ ಹೊಂದಿವೆ. ಈ ನಿಟ್ಟಿನಲ್ಲಿ ದೇವರ ದಾಸಿಮ್ಯನವರ ವಚನಗಳ ಕುರಿತು ಎಲ್ಲರು ತಿಳಿದುಕೊಳ್ಳಬೇಕು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಮಾತನಾಡಿ, ದೇವರ ದಾಸಿಮ್ಯನವರ ಕನಸಿನಂತೆ ಸಮಾಜದಲ್ಲಿ ಯಾರು ಕೂಡ ಹಸಿವಿನಿಂದ ಬಳಲಬಾರದು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು.
ಬಳ್ಳಾರಿಯ ಅಮಾತಿ ಬಸವರಾಜ ಅವರು ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿ, ವೃತ್ತಿಯಲ್ಲಿ ನೇಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದವರು. ಕಾಯಕವನ್ನೇ ಕೈಲಾಸವಾಗಿಸಿಕೊಂಡ ಸಾಧಕರಾಗಿದ್ದರು ಎಂದು ಹೇಳಿದರು.
ಆದ್ಯ ವಚನಕಾರ ದೇವರ ದಾಸಿಮಯ್ಯನವರು ಶಿವನಿಗೆ ತಮ್ಮನ್ನು ತಾವು ಒಪ್ಪಿಸಿಕೊಂಡು ದಾಸರಾದರು. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬಾಳಬೇಕು ಎಂದು ಸಾರಿದವರು ದಾಸಿಮಯ್ಯ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಕು.ತಸ್ಮಯ್ ಅನ್ನಪೂರ್ಣ ಮತ್ತು ತಂಡದಿAದ ವಚನ ಸಂಗೀತ ಪ್ರಸ್ತುತಪಡಿಸಿದರು. ಬಳಿಕ ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಸಿ.ದೇವಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಜಯಂತಿ ಕಾರ್ಯಕ್ರಮದಲ್ಲಿ ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಅಭಿಮತ ಲಿಂಗ ತಾರತಮ್ಯ ವಿರುದ್ಧ ಧ್ವನಿ ಎತ್ತಿದ ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯ


