ಬೆಂಗಳೂರು: ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧ ಬಂಧನಕ್ಕೆ ಒಳಗಾಗಿರುವ ವಕೀಲ ಜಿ ದೇವರಾಜೇಗೌಡ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಹೊಳೆನರಸೀಪುರ ಠಾಣಾ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಕಾಮಸಮುದ್ರ ಗ್ರಾಮದ ನಿವಾಸಿಯಾದ ಆರೋಪಿ ಜಿ ದೇವರಾಜೇಗೌಡಗೆ ಜಾಮೀನು ನಿರಾಕರಿಸಿ ಜೂನ್ 5ರಂದು ಹಾಸನದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿತ್ತು. ಇದರಿಂದ ದೇವರಾಜೇಗೌಡ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಹೊಳೆನರಸೀಪುರದ ಟೌನ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ದೂರುದಾರೆ ಮಹಿಳೆಯನ್ನು ಪ್ರತಿವಾದಿ ಮಾಡಲಾಗಿದೆ.
ಮಹಿಳೆಯೊಬ್ಬರು ಹೊಳೆ ನರಸೀಪುರ ಠಾಣೆಗೆ 2024ರ ಏಪ್ರಿಲ್ 1ರಂದು ದೂರು ದಾಖಲಿಸಿದ್ದರು. ಹಾಸದನ ನಿಲವಾಗಿಲು ಗ್ರಾಮದ ರಸ್ತೆಯಲ್ಲಿ 30×40 ಅಡಿ ವಿಸ್ತೀರ್ಣದ ನಿವೇಶನವನ್ನು ನನ್ನ ಪತಿ ಹೊಂದಿದ್ದಾರೆ. ಅದನ್ನು ಮಾರಾಟ ಮಾಡುವ ವಿಚಾರವಾಗಿ ದೂರು ದಾಖಲಾಗುವ ದಿನದಿಂದ 10 ತಿಂಗಳ ಹಿಂದೆ ದೇವರಾಜೇಗೌಡ ಅವರನ್ನು ಭೇಟಿ ಮಾಡಿದ್ದೆ. ಅಂದಿನಿಂದ ತನ್ನೊಂದಿಗೆ ಅವರು ಮಾತನಾಡುತ್ತಿದ್ದರು. ಆ ನಿವೇಶನದಲ್ಲಿ ನಾನೇ ಮನೆಯನ್ನು ಕಟ್ಟಿಸಿಕೊಡುತ್ತೇನೆ. ಉಪ ವಿಭಾಗಾಧಿಕಾರಿ ನನಗೆ ಪರಿಚಯವಿದ್ದು, ನಿಮ್ಮ ಕೆಲಸ ಮಾಡಿಕೊಡುತ್ತೇನೆ. ನೀನು ಒಬ್ಬಳೇ ಹಾಸನಕ್ಕೆ ಬರಬೇಕು ಎಂದು ಹೇಳಿದ್ದರು.