—-
ಕೊಪ್ಪಳ ಏಪ್ರಿಲ್ 04 (ಕರ್ನಾಟಕ ವಾರ್ತೆ): ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ನ್ಯಾಯ ನೀಡುವ ಪ್ರಕ್ರಿಯೆಗೆ ಹೆಚ್ಚು ವೇಗ ಸಿಗಲಿದೆ ಎಂದು ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರು ಮತ್ತು ಕೊಪ್ಪಳ ಜಿಲ್ಲೆಯ ಆಡಳಿತ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರು ಹೇಳಿದರು.
ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಕೊಪ್ಪಳ ಹಾಗೂ ಬಾರ್ ಅಸೋಸಿಯೇಷನ್ ಯಲಬುರ್ಗಾ ಇವರ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 04ರಂದು ಯಲಬುರ್ಗಾ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಯಲಬುರ್ಗಾ ನೂತನ ನ್ಯಾಯಾಲಯ ಸಂಕೀರ್ಣ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಡಿಜಿಟಲ್ ನ್ಯಾಯವ್ಯವಸ್ಥೆಯು ಸಾರ್ವಜನಿಕ ಸೇವೆ ಮತ್ತು ಸುಧಾರಿತ ಮೂಲಸೌಕರ್ಯಕ್ಕೆ ಹೊಸ ಧಿಕ್ಕಾಗಿದೆ. ನ್ಯಾಯಾಂಗ ವ್ಯವಸ್ಥೆಯ ಆಧುನೀಕರಣವು ಈ ಕಾಲದ ಅವಶ್ಯಕತೆಯಾಗಿದೆ. ತಂತ್ರಜ್ಞಾನವನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳುವುದರಿಂದ ನ್ಯಾಯಧಾನದ ಪ್ರಕ್ರಿಯೆ ತ್ವರಿತವಾಗಿ ಪಾರದರ್ಶಕವಾಗಿ ಹಾಗೂ ಜನಸ್ನೇಹಿಯಾಗಿ ರೂಪುಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ
ತಂತ್ರಜ್ಞಾನಕ್ಕೆ ವಿಶೇಷ ಒತ್ತು ನೀಡಲಾಗುತ್ತಿದ್ದು, ಇ-ಕೋರ್ಟ್ ವ್ಯವಸ್ಥೆ, ಇ-ಫೈಲಿಂಗ್, ವಿಡಿಯೋ ಕಾನ್ಫರೆನ್ಸ್ ವಿಚಾರಣೆ, ಡಿಜಿಟಲ್ ಸಾಕ್ಷ್ಯ ಸಂಗ್ರಹಣೆ ಹಾಗೂ ಆನ್‌ಲೈನ್ ಕೇಸ್ ಟ್ರ್ಯಾಕಿಂಗ್ ವ್ಯವಸ್ಥೆಗಳಂತಹ ತಾಂತ್ರಿಕ ವಿಧಾನಗಳು ನಡೆಯುತ್ತಿವೆ. ನ್ಯಾಯಾಲಯಗಳಿಗೆ ಆಗಮಿಸದೇ ವಕೀಲರು ಹಾಗೂ ವಾದಿಗಳು ಪ್ರಕರಣಗಳ ಸ್ಥಿತಿಯನ್ನು ತಿಳಿದುಕೊಳ್ಳುವಂತಾಗಬೇಕು. ಇದು ಸಮಯ ಮತ್ತು ವೆಚ್ಚದ ಉಳಿತಾಯಕ್ಕೆ ಸಹಾಯಕವಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ನ್ಯಾಯ ಸೌಲಭ್ಯ ವಿಸ್ತರಣೆ,
ಯಲಬುರ್ಗಾದಂತಹ ಪಟ್ಟಣಗಳಲ್ಲಿ ಆಧುನಿಕ ನ್ಯಾಯಾಲಯ ಸಂಕೀರ್ಣ ನಿರ್ಮಾಣವು ಗ್ರಾಮೀಣ ಜನತೆಗೆ ಬಹು ಉಪಯುಕ್ತವಾಗಲಿದೆ. ಇದರಿಂದ ದೂರದ ನಗರಗಳಿಗೆ ತೆರಳುವ ಅವಶ್ಯಕತೆ ಕಡಿಮೆಯಾಗುವುದಲ್ಲದೇ ಸ್ಥಳೀಯ ಮಟ್ಟದಲ್ಲೇ ನ್ಯಾಯ ದೊರೆಯುವ ವ್ಯವಸ್ಥೆಯು ಸಹ ಬಲವಾಗುತ್ತದೆ. ಈ ನೂತನ ನ್ಯಾಯಾಲಯ ಕಟ್ಟಡದಲ್ಲಿ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ವಿಶಾಲ ಹಾಗೂ ಸುಸಜ್ಜಿತ ನ್ಯಾಯಾಂಗ ಸಭಾಂಗಣಗಳು, ಡಿಜಿಟಲ್ ದಾಖಲೆ ಸಂಗ್ರಹಣಾ ವ್ಯವಸ್ಥೆ, ಸಾರ್ವಜನಿಕರಿಗಾಗಿ ಆರಾಮದಾಯಕ ನಿರೀಕ್ಷಣಾ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ ಎಂದರು.
ನ್ಯಾಯಾಂಗ ಸೇವೆಯ ವೇಗ ಮತ್ತು ಗುಣಮಟ್ಟ ತುಂಬಾ ಪ್ರಮುಖವಾಗಿದ್ದು, “ನ್ಯಾಯ ನೀಡುವಲ್ಲಿ ವಿಳಂಬವು ನ್ಯಾಯ ನಿರಾಕರಣೆಯಂತೆ” ಎಂಬ ಮಾತಿನಂತೆ ಪ್ರಕರಣಗಳ ಶೀಘ್ರ ನಿವಾರಣೆಗೆ ನ್ಯಾಯಾಂಗ ಅಧಿಕಾರಿಗಳು ಹಾಗೂ ವಕೀಲರು ಸಹಕಾರ ನೀಡಬೇಕು. ಮಧ್ಯಸ್ಥಿಕೆ ಮತ್ತು ಪರ್ಯಾಯ ವಿವಾದ ಪರಿಹಾರ (ಎಡಿಆರ್) ವಿಧಾನಗಳ ಬಳಕೆ ಹೆಚ್ಚಿಸುವುದರಿಂದ ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆಯಾಗಬಹುದು. ಯುವ ವಕೀಲರು ತಂತ್ರಜ್ಞಾನ, ಜ್ಞಾನವನ್ನು ಹೆಚ್ಚಿಸಿಕೊಂಡು, ನ್ಯಾಯಾಂಗ ಕ್ಷೇತ್ರದಲ್ಲಿ ನವೀನ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಡಿಜಿಟಲ್ ಸಾಧನಗಳ ಬಳಕೆ, ಕಾನೂನು ಸಂಶೋಧನೆ, ಮತ್ತು ಆನ್‌ಲೈನ್ ವೇದಿಕೆಗಳ ಮೂಲಕ ತಮ್ಮ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ನ್ಯಾಯಧಾನಕ್ಕೆ ವೇಗ: ನ್ಯಾ. ಸಿ.ಎಂ.ಪೂಣಚ್ಚ


