ಬೆಂಗಳೂರು: ಬೆಳೆ ಹಾನಿ ಸಂಭವಿಸಿದ 14.24 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟು 1,033.60 ಕೋಟಿ ರೂ. ಹೆಚ್ಚುವರಿ ಪರಿಹಾರ ಒದಗಿಸುವ ಕಾರ್ಯಕ್ಕೆ ಮುಖ್ಯಮಂತ್ರಿ ಅವರು ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು.
ರೈತರ ಖಾತೆಗಳಿಗೆ ಇನ್ ಪುಟ್ ಸಬ್ಸಿಡಿ ನೀಡಿ ಬಳಿಕ ಮುಖ್ಯಮಂತ್ರಿಗಳು ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಸ್ತುತ ವರ್ಷದ ಮಾನ್ಸೂನ್ ಅವಧಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸಬ್ಸಿಡಿಗಾಗಿ 1,033.60 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಲಾಗಿದ್ದು, ಇಂದು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ರೈತರ ಪರವಾಗಿದ್ದು, ಬೆಳೆ ಹಾನಿಗೊಳಗಾದ ರೈತರಿಗೆ ಹೆಚ್ಚಿನ ನೆರವು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇನ್ಪುಟ್ ಸಬ್ಸಿಡಿಗಳ ದರಗಳನ್ನು ಹೆಚ್ಚಿಸಿದೆ. ಗರಿಷ್ಟ 2 ಹೆಕ್ಟೇರ್ಗೆ ಸೀಮಿತವಾಗಿ, ಮಳೆಯಾಶ್ರಿತ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ 8,500 ರೂ.ಗಳಿಂದ 17 ಸಾವಿರ ರೂ., ನೀರಾವರಿ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ 17 ಸಾವಿರ ರೂ.ಗಳಿಂದ 25,500 ಹಾಗೂ ರೂ. ಬಹು ವಾರ್ಷಿಕ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ 22,500 ರೂ.ಗಳಿಂದ 31 ಸಾವಿರ ರೂ.ಗೆ ಹೆಚ್ಚಿಸಲಾಗಿದೆ ಎಂದು ಸಿಎಂ ಹೇಳಿದರು.


