ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅಪಹರಣ, ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ತಪ್ಪಿತಸ್ಥರಲ್ಲ. ಯಾರದ್ದೋ ತಪ್ಪಿನಿಂದಾಗಿ ದರ್ಶನ್ ಈ ಸ್ಥಿತಿಗೆ ಬಂದು ನಿಂತಿದ್ದಾರೆ ಎಂದು ಅವರ ಪರ ವಕೀಲ ನಾರಾಯಣಸ್ವಾಮಿ ತಿಳಿಸಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ಅವರನ್ನು ಭೇಟಿಯಾಗುವ ಮುನ್ನ ಅನ್ನಪೂರ್ಣೇಶ್ವರಿ ನಗರ ಠಾಣೆ ಬಳಿ ಮಾತನಾಡಿದ ವಕೀಲರು, ದರ್ಶನ್ ವಿರುದ್ಧದ ಆರೋಪಗಳನ್ನು ಅಲ್ಲಗಳೆದರು.
”ಕೃತ್ಯ ನಡೆದಿರುವ ಸ್ಥಳಕ್ಕೆ ಬಂದು ಹೋಗಿದ್ದಾರೆ ಎಂದ ಮಾತ್ರಕ್ಕೆ ದರ್ಶನ್ ಅವರೇ ಕೃತ್ಯ ಎಸಗಿದ್ದಾರೆ ಎನ್ನುವುದು ಸರಿಯಲ್ಲ. ಖಂಡಿತವಾಗಿಯೂ ದರ್ಶನ್ ಅವರು ಸಾಯಿಸುವ ಹಂತಕ್ಕೆ ಹೋಗುವವರಲ್ಲ. ಪೊಲೀಸರು ವಶಕ್ಕೆ ಪಡೆಯಲು ಬಂದಾಗಲೇ ಹತ್ಯೆಯ ವಿಚಾರ ದರ್ಶನ್ ಅವರಿಗೆ ತಿಳಿದಿದೆ, ಅವರು ನಿರಪರಾಧಿ” ಎಂದು ನಾರಾಯಣಸ್ವಾಮಿ ಹೇಳಿದರು.
ರೇಣುಕಾಸ್ವಾಮಿ ಮೃತಪಟ್ಟಿರುವುದರ ಕುರಿತು ದರ್ಶನ್ ಅವರಿಗೆ ತಿಳಿದಿತ್ತು ಎಂಬುದರ ಕುರಿತು ಮಾತನಾಡಿದ ನಾರಾಯಣಸ್ವಾಮಿ, ”ಘಟನೆಯ ಕುರಿತು ದರ್ಶನ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಅದಕ್ಕೆ ಯಾವುದೇ ದಾಖಲೆಗಳೂ ಇಲ್ಲ. ದರ್ಶನ್ ಅವರೇ ಹೊಡೆದಿದ್ದಾರೆ, ಅವರೇ ಹತ್ಯೆ ಮಾಡಿದ್ದಾರೆ ಎಂಬುದನ್ನೂ ಯಾರೂ ಸಹ ಹೇಳಿಲ್ಲ” ಎಂದರು.
ಇನ್ನು ಪವಿತ್ರಾ ಗೌಡ ಅವರ ಪಾತ್ರದ ಕುರಿತು ಮಾತನಾಡಿದ ವಕೀಲರು, ”ಖಂಡಿತವಾಗಿಯೂ ಈ ಪ್ರಕರಣದಲ್ಲಿ ಪವಿತ್ರಾ ಗೌಡ ಅವರ ಪಾತ್ರ ಸಹ ಇಲ್ಲ. ರೇಣುಕಾಸ್ವಾಮಿಗೆ ಆರೋಗ್ಯದ ಸಮಸ್ಯೆ ಸಹ ಇತ್ತು ಎಂಬ ಮಾಹಿತಿ ಇದೆ. ಹೊಡೆದಿದ್ದರಿಂದಲೇ ಸತ್ತಿದ್ದಾನೆ ಎಂಬುದು ಖಂಡಿತಾ ಇಲ್ಲ. ಮೃತದೇಹದ ಮೇಲಿರುವ ಗಾಯದ ಕಲೆಗಳು ಹಲ್ಲೆಯಿಂದಾಗಿ ಆಗಿರುವುದಲ್ಲ, ಮೃತದೇಹವನ್ನು ನಾಯಿಗಳು ಕಚ್ಚಿ ಎಳೆದಾಡಿರುವುದರಿಂದ ಆಗಿರುವುದು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸತ್ಯಾಂಶ ತಿಳಿಯಲಿದೆ. ಹಲ್ಲೆ ಯಾರು ಮಾಡಿದ್ದಾರೆಂಬುದು ತಿಳಿಯಬೇಕಿದೆ. ದರ್ಶನ್ ಆಗಲಿ, ಪವಿತ್ರಾ ಗೌಡ ಆಗಲಿ ಹಲ್ಲೆ ಮಾಡಿದ್ದೇವೆ ಎಂದು ಒಪ್ಪಿಕೊಂಡಿಲ್ಲ. ಆದ್ದರಿಂದ ದಯವಿಟ್ಟು ಅಂತಿಮ ನಿರ್ಧಾರಕ್ಕೆ ಬರುವುದು ಸರಿಯಲ್ಲ, ನಿರಪರಾಧಿಗಳಿಗೆ ಯಾವ ರೀತಿಯಿಂದಲೂ ತೊಂದರೆಯಾಗಬಾರದು” ಎಂದು ಹೇಳಿದರು.