ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಜೀವಹಾನಿ ಉಂಟಾದರೆ ಅವರ ವಿರುದ್ಧ ಕ್ರಮ: :ಸಚಿವ ಸಂತೋಷ ಲಾಡ್

Ravi Talawar
ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಜೀವಹಾನಿ ಉಂಟಾದರೆ ಅವರ ವಿರುದ್ಧ ಕ್ರಮ: :ಸಚಿವ ಸಂತೋಷ ಲಾಡ್
WhatsApp Group Join Now
Telegram Group Join Now
ಧಾರವಾಡ : ಮಳೆಗಾಲದಂತ ಸಂಕಷ್ಟ ಸಂದರ್ಭದಲ್ಲಿಯೂ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಾರ್ವಜನಿಕ ಸ್ನೆಹಿಯಾಗಿ ನಿರ್ವಹಿಸಬೇಕು. ನಿಮ್ಮ ಇಲಾಖೆ ಕರ್ತವ್ಯಗಳಿಂದ ವಿಮುಖರಾಗಬೇಡಿ. ಯಾವುದೇ ಅಧಿಕಾರಿ, ಸಿಬ್ಬಂದಿಗಳ ಕರ್ತವ್ಯ ನಿರ್ಲಕ್ಷ್ಯದಿಂದ ಜೀವ ಹಾನಿ ಉಂಟಾದರೆ, ಆಯಾ ಅಧಿಕಾರಿಯನ್ನು ಜವಾಬ್ದಾರಗೊಳಿಸಿ, ಕಾನೂನುಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.
 ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಸ್ತುತ ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿ, ಅದಕ್ಕೆ ಕೈಗೊಳ್ಳಬೇಕಾದರೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಭೆ ಜರುಗಿಸಿ, ಮಾತನಾಡಿದರು.ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆಯಲ್ಲಿ ಸುಮಾರು 2 ಸಾವಿರದಷ್ಟು ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಐದು ಮೀಟರ್ ರಸ್ತೆಯನ್ನು ಸ್ವಚ್ಛತೆ ಕೊಟ್ಟು, ಪ್ರತಿದಿನ 10 ಕಿ.ಮೀ ರಂತೆ ಸಂಪೂರ್ಣ ನಗರವನ್ನು ಸ್ವಚ್ಛ ಮಾಡಲು ಒಂದು ರೋಡ್ ಮ್ಯಾಪ್‍ನ್ನು ಸಿದ್ಧ ಮಾಡಿಕೊಳ್ಳಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಸಚಿವರು ಹೇಳಿದರು.
ಜನರು ಜಾಗೃತರಾಗಬೇಕು ಇಳಿಜಾರು ಪ್ರದೇಶದಲ್ಲಿ ಅವರು ಮನೆ ಕಟ್ಟುತ್ತಾರೆ, ಅನಧಿಕೃತ ಜಾಗದಲ್ಲಿ ಅವರೇ ನಿವೇಶನವನ್ನು ಕಟ್ಟಿಕೊಳ್ಳುತ್ತಾರೆ, ಅನಧಿಕೃತ ಲೇಜೌಟ್‍ಗಳನ್ನು ಮಾಡಿಕೊಳ್ಳುತ್ತಾರೆ. ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಸಾರ್ವಜನಿಕರಿಗೆ ನಾಗರಿಕ ಸಮಸ್ಯೆಗಳನ್ನು ಅರ್ಥೈಸಬೇಕು. ಅದಕ್ಕಾಗಿ ಸಾರ್ವಜನಿಕರಿಗೆ ಈ ಕುರಿತು ಮನವರಿಕೆಯಾಗಬೇಕು ಎಂದು ಅವರು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ಹಾಗೂ ಎಲ್ಲ ತಾಲೂಕುಗಳು ಸೇರಿ ಅಂದಾಜು ಶೇ. 67 ರಷ್ಟು ಮುಂಗಾರು ಬಿತ್ತನೆಯಾಗಿದೆ. ಬಿತ್ತನೆ ಬೀಜ ಹಾನಿ ಪರಿಶೀಲಿಸಿ ಹಾಗೂ ರೈತ ಮುಖಂಡರೊಂದಿಗೆ ಚರ್ಚೆ ಮಾಡಿ, ನಂತರ ಮತ್ತೆ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅವರು ಹೇಳಿದರು.
  ಎಲ್ಲ ಗ್ರಾಮ ಪಂಚಾಯತ ಅಧಿಕಾರಿಗಳವರು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ಆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ, ಜನರೊಂದಿಗೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಬೇಕು.. ಒಂದು ವೇಳೆ ನಾವು ನೆರೆಹಾವಳಿಗಳ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಯಾವುದೇ ಅಧಿಕಾರಿಗಳು ಇಲ್ಲದೆ ಇರುವುದು ಕಂಡುಬಂದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಮಳೆಗಾಲ ಮುಗಿಯುವವರೆಗೂ ಯಾವುದೇ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನವನ್ನು ಬಿಟ್ಟು ಹೋಗಬಾರದು. ಜನಸಾಮಾನ್ಯರು ಯಾವುದೇ ಸಮಯದಲ್ಲಿ ಕರೆ ಮಾಡಿದರು ಅಧಿಕಾರಿಗಳು ಅದಕ್ಕೆ ಸರಿಯಾಗಿ ಸ್ಪಂದನೆ ಮಾಡಬೇಕು ಎಂದು ಹೇಳಿದರು.
ಮುಂಬರುವಂತಹ ಪ್ರತಿಯೊಂದು ಕೆ.ಡಿ.ಪಿ ಸಭೆಯಲ್ಲಿ ಎಲ್ಲಾ ಅಧಿಕಾರಿ ವರ್ಗದವರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವಂತಹ ಸ್ಥಳಗಳಲ್ಲಿ ಯಾವ ರೀತಿ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸ್ಥಳಗಳನ್ನು ಗುರುತಿಸಬೇಕು. ಮಳೆಗಾಲ ಮುಗಿಯುವವರೆಗೂ ಅಧಿಕಾರಿಗಳು 24*7 ಕೆಲಸವನ್ನು ಮಾಡಬೇಕು ಎಂದು ಸಚಿವರು ತುಳಿಸಿದರು.
ಮಳೆಯಿಂದ ಹಾನಿಗೊಳಗಾದ ರಸ್ತೆಗಳನ್ನು ಕೂಡಲೇ ಯಾವುದೇ ರೀತಿ ಅಡಚಣೆಗಳು ಜನರಿಗೆ ಆಗದ ಹಾಗೆ ತಾತ್ಕಾಲಿಕವಾಗಿ ಆದರೂ ರಸ್ತೆ ಮಾಡಿ ಜನರಿಗೆ ಮಾರ್ಗವನ್ನು ಕಲ್ಪಿಸಬೇಕು ಎಂದು ಲೋಕೋಪಯೋಗಿ ಇಲಾಖೆಯವರಿಗೆ ಸೂಚಿಸಿದರು.
ಅಂಗನವಾಡಿ, ಶಾಲೆ, ಕಾಲೇಜುಗಳ ಕಟ್ಟಡಗಳು ಮಳೆಯಿಂದ ಸೋರುತ್ತಿದ್ದರೆ ಅಂತಹ ಸ್ಥಳಗಳಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿದರೆ ಅಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹೊಣೆಯಾಗುತ್ತಾರೆ ಎಂದು ಹೇಳಿದರು.
*ಸ್ಥಳೀಯ ಅಧಿಕಾರಿಗಳಿಗೆ ಮೊಬೈಲ್ ಕರೆ:* ಸಚಿವ ಸಂತೋಷ ಲಾಡ್ ಅವರು ಇಂದು ಬೆಳಿಗ್ಗೆ ಸಭೆಯಲ್ಲಿಯೇ ಎಲ್ಲ ತಾಲೂಕಿನ ಆಯ್ದ ಗ್ರಾಮಪಂಚಾಯತಿಯ ಪಂಚಾಯತ ರಾಜ್ಯ ಅಭಿವೃದ್ಧಿ ಅಧಿಕಾರಿಗಳನ್ನು ಮೊಬೈಲ್ ಕರೆ ಮಾಡಿ, ಸ್ಥಾನಿಕವಾಗಿ ಲಭ್ಯರಿರುವ ಬಗ್ಗೆ ಪರಿಶೀಲಿಸಿದರು. ಮೊಬೈಲ್ ಕರೆಯಲ್ಲಿ ಮಾತನಾಡಿ, ತಾವು ಎಲ್ಲಿದ್ದರಿ, ನಿಮ್ಮೂರಿಗೆ ಮಳೆ ಹಾನಿ, ಸಾರ್ವಜನಿಕರ ಸಮಸ್ಯೆಗಳಿಗೆ ಏನು ಕ್ರಮಕೈಗೊಂಡಿದ್ದರಿ ಎಂದು ಪ್ರಶ್ನಿಸಿ, ಮಳೆಗಾಲ ಮುಗಿಯುವವರೆಗೆ ನಿಮ್ಮ ಕೇಂದ್ರ ಸ್ಥಾನವನ್ನು ಬಿಡದಂತೆ ಮತ್ತು ಯಾವುದೇ ರೀತಿಯ ಹಾನಿಯಾಗದಂತೆ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಬೇಕೆಂದು ಸೂಚಿಸಿದರು.
ಕರ್ನಾಟಕ ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಬರುವ ಪ್ರತಿಯೊಂದು ಹಳ್ಳಿಗಳ ಬಗ್ಗೆ ಹೆಚ್ಚು ಗಮನಹರಿಸಿ. ತಾಲೂಕಾ ಅಧಿಕಾರಿಗಳು ತಾಲೂಕುಗಳಲ್ಲಿ ಆದ ಮಳೆ ಹಾನಿಯ ಬಗ್ಗೆ ವಿಚಾರಿಸಿ ಮೂಲ ಕಾರಣ ಏನೆಂದು ತಿಳಿದು ಸಾರ್ವಜನಿಕರಿಗೆ ತೊಂದರೆ ಆಗದ ಹಾಗೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಜನರು ತಮಗೆ ಆದ ತೊಂದರೆಗಳ ಬಗ್ಗೆ ದೂರವಾಣಿ ಮೂಲಕ ಕರೆ ಮಾಡಿದರೆ ಅಧಿಕಾರಿಗಳು ಸ್ಪಂದಿಸಬೇಕು. ಮತ್ತು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿ ಎಂದು ಹೇಳಿದರು. ಪ್ರವಾಹದ ಸಂದರ್ಭದಲ್ಲಿ ಅಧಿಕಾರಿಗಳು ಜನರೊಂದಿಗೆ ಇದ್ದು ಜನರ ನೋವುಗಳನ್ನು ಆಲಿಸುವುದು ಮುಖ್ಯವಾಗಿದೆ ಎಂದು ಅವರು ಹೇಳಿದರು.
ಶಾಸಕ ಎನ್. ಎಚ್. ಕೋನರೆಡ್ಡಿ ಅವರು ಮಾತನಾಡಿ, ನವಲಗುಂದ ತಾಲೂಕಿನಲ್ಲಿ ಅತಿ ಹೆಚ್ಚಾಗಿ ಮಳೆಯಾಗಿದು, ಬೇರೆ ಜಿಲ್ಲೆಗಳಿಂದ, ತಾಲೂಕುಗಳಿಂದ ನೀರು ಹರಿದು ಬರುತ್ತಿರುವುದರಿಂದ ಪ್ರವಾಹವು ಉಂಟಾಗುತ್ತಿದೆ. ಇದರಿಂದ ರಸ್ತೆಗಳು, ಸೇತುವೆಗಳು, ಮನೆಗಳು, ಬೆಳೆ ಹಾನಿ ಆಗುತ್ತಿರುವದರಿಂದ ಅದನ್ನು ಸರಿಪಡಿಸುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಬೇಕು ಎಂದು ತಿಳಿಸಿದರು.
ಕೆಲವೊಂದು ಹಳ್ಳಿಗಳ ಮಾರ್ಗವೂ ಸ್ಥಗಿತವಾಗಿದೆ. ಬಸ್ಸುಗಳ ಸಂಚಾರ ನಿಂತಿರುವುದರಿಂದ ಅದನ್ನು ತುರ್ತಾಗಿ ಸರಿಪಡಿಸಬೇಕೆಂದು ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದವರು. ತುಂಬಿ ಹರಿಯುತ್ತಿರುವ ಹಳ್ಳಗಳಿಂದ ಜನರಿಗೆ ತೊಂದರೆ ಆಗದ ಹಾಗೆ ನೋಡಿಕೊಳ್ಳಬೇಕು ಮತ್ತು ಮುಂದೆ ಬರುವ ಮಳೆಯಿಂದ ಜಾನುವಾರಗಳಿಗೆ ಮತ್ತು ಪ್ರಾಣಿ-ಪಕ್ಷಿಗಳಿಗೆ ಹಾನಿಯಾಗದ ಹಾಗೆ ಮುಂಜಾಗೃತಾ ಕ್ರಮ ವಹಿಸಬೇಕೆಂದು ತಿಳಿಸಿದರು.
ಜಿಲ್ಲಾಧಿಕಾರಿ ದಿವ್ಯಾ ಪ್ರಭು ಅವರು ಮಾತನಾಡಿ, ಜಿಲ್ಲೆಯಲ್ಲಿ ಬಾರಿ ಮಳೆಯಾದ ಕಾರಣ ಪ್ರತಿಯೊಬ್ಬ ಅಧಿಕಾರಿಯು ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿ ಇರುವ ಸಮಸ್ಯೆಗಳ ಬಗ್ಗೆ ಊರಿನ ಮುಖಂಡರೊಂದಿಗೆ ಚರ್ಚಿಸಿ, ಹಾಳಾಗಿರುವ ರಸ್ತೆಗಳ ಬಗ್ಗೆ ಮತ್ತು ಶಾಲೆಗಳ ಬಗ್ಗೆ, ಕುಡಿಯುವ ನೀರಿಗಾಗಿ ಆದ ತೊಡರೆಗಳ ಬಗ್ಗೆ ಗ್ರಾಮ ಪಂಚಾಯತ ಅಧಿಕಾರಿಯೋಂದಿಗೆ ಮಾತಾಡನಾಡಿ ಸಮಸ್ಯೆಗಳನ್ನು ಬಗೆಹರಿಸಲು ಎಂದು ತಿಳಿಸಿದರು.
ಅಧಿಕ ಮಳೆಯಾಗಿರುವುದರಿಂದ ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಜನರು ಹಳ್ಳಗಳಿಗೆ ಇಳಿಯದ ಹಾಗೆ ಮತ್ತು ಜಾನುವಾರಗಳನ್ನು ನೀರಿಗೆ ಬಿಡದ ಹಾಗೆ ನಾಮಫಲಕಗಳನ್ನು ಹಾಕಿ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು  ಎಂದು ಹೇಳಿದರು.
ಸಂಬಂಧಪಟ್ಟ ಇಲಾಖೆಯವರು ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ತಾವೇ ಹೋಗಿ ಪರಿಶೀಲಿಸಿ, ಅಲ್ಲಿ ಆದ ಅವಘಡದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು, ತುರ್ತಾಗಿ ಕ್ರಮವನ್ನು ತೆಗೆದುಕೊಂಡು ಜನಸಾಮಾನ್ಯರಿಗೆ ತೊಂದರೆ ಆಗದ ಹಾಗೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.
ಅಧಿಕ ಮಳೆಯಿಂದಾಗಿ ಶಾಲೆಗಳಲ್ಲಿ ಪಾಠ ಬೋಧನೆಗೆ ತೊಂದರೆ ಉಂಟಾದರೆ ಅಂತಹ ಶಾಲೆಗಳನ್ನು ಗುರುತಿಸಿ, ಶೀಘ್ರವೇ ಬೇರೆ ಕೊಠಡಿಗಳಿಗೆ ಸ್ಥಾಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಯಾವುದೇ ಜೀವ ಹಾನಿ ಆಗದ ಹಾಗೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.  ಎಲ್ಲರೂ ಕಟ್ಟುನಿಟ್ಟಾದ ಕೆಲಸವನ್ನು ಮಾಡಬೇಕು ಹಾಗೂ ಜನರೊಂದಿಗೆ ಮತ್ತು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಇರಬೇಕೆಂದು ತಿಳಿಸಿದರು.
ನಗರಗಳಲ್ಲಿ ಮಳೆಯಿಂದಾಗಿ ವಿದ್ಯುತ್ ಕಂಬಗಳು ವಾಲಿರುವುದು, ತಂತಿಗಳು ತುಂಡಾಗಿ ಬಿದ್ದಿರುವುದನ್ನು ಗಮನಹರಿಸಿ, ತುರ್ತಾಗಿ ಕ್ರಮವಹಿಸಿ ಜನರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಗೋಪಾಲ್ ಎಮ್. ಬ್ಯಾಕೋಡ್,  ಪ್ರೂಬೆಷನರಿ  ಐಎಎಸ್ ಅಧಿಕಾರಿ ರೀತಿಕಾ ವರ್ಮಾ, ಉಪ ಪೆÇಲೀಸ್ ಆಯುಕ್ತ ಮಹಾನಿಂಗ್ ನಂದಗಾಂವಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕಾ ಮಟ್ಟದ ಅಧಿಕಾರಿಗಳು  ಸಭೆಯಲ್ಲಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article