ಬೆಂಗಳೂರು, ನವೆಂಬರ್ 11:ನಕಲಿ ವೈದ್ಯಕೀಯ ದಾಖಲೆಗಳನ್ನು ಸೃಷ್ಟಿಸಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಪಡೆಯುತ್ತಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ನೆಲಮಂಗಲದ ಧನಂಜಯ (59) ಬಂಧಿತ ಆರೋಪಿಯಾಗಿದ್ದು, ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ನೀಡಲಾಗುವ ಆರ್ಥಿಕ ಸಹಾಯ ಪಡೆಯಲು ನಕಲಿ ಆಸ್ಪತ್ರೆ ಬಿಲ್ಗಳು ಮತ್ತು ವೈದ್ಯಕೀಯ ದಾಖಲೆಗಳನ್ನು ಈತ ಸಲ್ಲಿಸುತ್ತಿದ್ದ ಎಂಬುದು ಗೊತ್ತಾಗಿದೆ.
ಫೇಕ್ ದಾಖಲಾತಿಯಿಂದ ಸಿಎಂ ಪರಿಹಾರ ನಿಧಿ ಹಣ ಗುಳುಂ: ಆರೋಪಿ ಅಂದರ್

ಶಿಕ್ಷಕ ತರಬೇತಿ ಕೋರ್ಸ್ ಪೂರ್ಣಗೊಳಿಸಿದ್ದ ಆರೋಪಿ ಧನಂಜಯ ಯಶವಂತಪುರದಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳ ವಿವರಗಳನ್ನು ಸಂಗ್ರಹಿಸುತ್ತಿದ್ದ. ಅವರ ಮಾಹಿತಿಯನ್ನು ಬಳಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಮುಖ್ಯಮಂತ್ರಿ ಕಚೇರಿಗೆ ಅವುಗಳನ್ನು ಸಲ್ಲಿಸಿ ಪರಿಹಾರ ಹಣ ಪಡೆಯುತ್ತಿದ್ದ ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಧನಂಜಯ ಒಬ್ಬನೇ ಕೆಲಸ ಮಾಡುತ್ತಿರಲಿಲ್ಲ. ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಕ್ಯಾತಣ್ಣ, ಜಯಮ್ಮ, ಯಶೋದಮ್ಮ ಮತ್ತು ಚಂದ್ರಶೇಖರ್ ಎಂಬ ನಾಲ್ವರೂ ಈ ರೀತಿಯ ಕೆಲಸದಲ್ಲಿ ತೊಡಗಿದ್ದರು. ಇವರಲ್ಲಿ ಕ್ಯಾತಣ್ಣ ಮತ್ತು ಮತ್ತೊಬ್ಬ ಆರೋಪಿಯು ಮೃತಪಟ್ಟಿದ್ದಾರೆ ಎನ್ನಲಾಗಿದೆ.

