ಬಳ್ಳಾರಿ: 15. ಬಾಗಲಕೋಟೆಯ ಸೈದಾಪುರದಲ್ಲಿ ಹಲವಾರು ಕಬ್ಬು ತುಂಬಿದ ಟ್ರಾಕ್ಟರುಗಳು ಸುಟ್ಟು ಭಸ್ಮವಾಗಿರುವುದು ವಿಷಾದನೀಯ. ಇದಕ್ಕೆ ಯಾರೇ ಪ್ರೇರಣೆ ನೀಡಿದ್ದರೂ ಈ ಕೃತ್ಯವನ್ನು ನಾವು ಖಂಡಿಸುತ್ತೇವೆ ಎಂದು ಎಐಕೆಕೆಎಂಎಸ್ ಭಗವಾನ್ ರೆಡ್ಡಿ, ಹೆಚ್. ಆರ್. ಬಸವರಾಜಪ್ಪ, [ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ], ಬಡಗಲಪುರನಾಗೇಂದ್ರ, [ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ], ಚುಕ್ಕಿ ನಂಜುAಡಸ್ವಾಮಿ, [ರಾಜ್ಯ ಅಧ್ಯಕ್ಷೀಯ ಮಂಡಳಿ ಸದಸ್ಯರು, ಕರ್ನಾಟಕ ರಾಜ್ಯ ರೈತ ಸಂಘ (ಸಾಮೂಹಿಕ ನಾಯಕತ್ವ)], ಸಿದ್ಗೌಡ ಮೋದಗಿ, [ಅಧ್ಯಕ್ಷರು, ಭಾರತೀಯ ಕೃಷಿಕ ಸಮಾಜ [ಸಂಯುಕ್ತ] ನೂರ್ ಶ್ರೀಧರ್, [ಅಧ್ಯಕ್ಷರು, ಕರ್ನಾಟಕ ಜನಶಕ್ತಿ], ಡಿ.ಹೆಚ್. ಪೂಜಾರ್, [ಅಧ್ಯಕ್ಷರು, ಎಐಯುಕೆಎಸ್,], ಸಿರಿಮನೆ ನಾಗರಾಜ್, [ಉಪಾಧ್ಯಕ್ಷರು, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ] ಜಂಟಿಯಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಕರ್ನಾಟಕದ ರೈತ ಚಳವಳಿ ಇತಿಹಾಸದುದ್ದಕ್ಕೂ ಶಾಂತಿಯುತವಾಗಿ ನಡೆದುಬಂದಿದೆ. ರೈತರದು ಸದಾ ಜೀವಪರ ನಿಲುವು, ವಿನಾಶಕಾರಿ ಕೃತ್ಯಗಳನ್ನು ರೈತ ಚಳವಳಿ ಎಂದೂ ಪಾಲಿಸಿಲ್ಲ, ಸಮ್ಮತಿಸಿಲ್ಲ. ಆದರೆ ಈ ಘಟನೆಗೆ ಇತ್ತೀಚಿಗೆ ನಡೆದ ರೈತ ಚಳವಳಿ ಸರಿಯಾದ ರೀತಿಯಲ್ಲಿ ಸಮಾರೋಪಗೊಳ್ಳದೇ ಹೋದದ್ದು ಮುಖ್ಯ ಕಾರಣವಾಗಿದೆ. ಇದಕ್ಕೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಕಾರ್ಖಾನೆ ಮಾಲೀಕರು ಹಾಗೂ ಜಿಲ್ಲಾಡಳಿತ ಪ್ರಮುಖ ಹೊಣೆಯನ್ನು ಹೊತ್ತುಕೊಳ್ಳಲೇಬೇಕಿದೆ ಎಂದರು.
ಅವೈಜ್ಞಾನಿಕ ಎಫ್ ಆರ್ ಪಿ ಯನ್ನು ನಿಗದಿ ಮಾಡುವ ಮೂಲಕ ಕೇಂದ್ರ ಸರ್ಕಾರ ಸಮಸ್ಯೆಯ ಮೂಲವಾಗಿ ಕೆಲಸ ಮಾಡಿದೆ. ಸೂಕ್ತ ಬೆಲೆ ಸಿಗದೆ ರೈತರ ಆಕ್ರೋಶ ಸ್ಪೋಟಗೊಂಡಾಗ ರಾಜ್ಯ ಸರ್ಕಾರ ಕೂಡಲೇ ಅದನ್ನು ಬಗೆಹರಿಸುವ ಬಿಗಿ ನಿಲುವು ತೆಗೆದುಕೊಳ್ಳಲು ಮುಂದಾಗಲಿಲ್ಲ. ಕೊನೆಗೆ ಪರಿಸ್ಥಿತಿ ಕೈ ಮೀರಿದಾಗ ಕಾರ್ಖಾನೆ ಮಾಲೀಕರ ಸಭೆ ಕರೆಯಿತು. ಆ ಸಭೆಯಲ್ಲಿ ಕೋಟ್ಯಾಂತರ ಲಾಭ ಮಾಡುತ್ತಿರುವ ಕಾರ್ಖಾನೆ ಮಾಲೀಕರು ರೈತರಿಗೆ ಪ್ರತಿ ಟನ್ನಿಗೆ ನೂರು ರೂ ಹೆಚ್ಚಿಸಲು ತಯಾರಿರಲಿಲ್ಲ. ಇವರ ಲೋಭಕೋರತನ ಮೊಂಡು ನಿಲುವು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿತು. ಕೊನೆಗೆ ರಾಜ್ಯ ಸರ್ಕಾರ ತಾನೂ ೫೦ ರೂ ಸೇರಿಸಿ ೩೩೦೦ ರೂ ಕೊಡುವ ತೀರ್ಮಾನ ತೆಗೆದುಕೊಂಡಿತಾದರೂ ರಿಕವರಿಯನ್ನು ೧೦.೨೫ ಬದಲು ೧೧.೨೫ ಕ್ಕೆ ನಿಗದಿ ಮಾಡಿದ್ದು, ಕೊಟ್ಟಂತೆ ಕಂಡರೂ ಏನೂ ಕೊಡಲಿಲ್ಲ, ಎಂಬ ಭಾವ ರೈತರಲ್ಲಿ ಉಳಿಯಲು ಕಾರಣವಾಯಿತು. ಈ ಕಾರಣಕ್ಕಾಗಿಯೇ ಬಾಗಲಕೋಟೆಯಲ್ಲಿ ಹೋರಾಟ ನಿಲ್ಲದೆ ಮುಂದುವರಿಯಿತು. ರೈತರನ್ನು ಕರೆದು, ವಿಶ್ವಾಸಕ್ಕೆ ತೆಗೆದುಕೊಂಡು, ತನ್ನಿಂದ ಆಗಿರುವ ಅಚಾತುರ್ಯವನ್ನು ಸರಿಪಡಿಸಿಕೊಂಡು ರಿಕವರಿಯನ್ನು ೧೦.೨೫ ಗೆ ತರುವ ಬದಲು, ಜಿಲ್ಲಾ ಸಚಿವರು “ಹೋರಾಟ ಮುಗಿದಿದೆ, ಕಬ್ಬು ಸಾಗಿಸಿ” ಎಂಬ ಸಂದೇಶವನ್ನು ಕಾರ್ಖಾನೆ ಮಾಲೀಕರಿಗೆ ಕೊಟ್ಟರು. ರೈತರ ಪ್ರತಿರೋಧವನ್ನು ಲೆಕ್ಕಿಸದೆ ಜಿಲ್ಲಾಡಳಿತ ಮತ್ತು ಕಾರ್ಖಾನೆ ಮಾಲೀಕರು ಸೇರಿ ಪೋಲೀಸ್ ಬಲದ ಬೆಂಬಲದಲ್ಲಿ ಕಬ್ಬು ಸಾಗಿಸಲು ಹೊರಟಿದ್ದು, ರೈತರ ಆಕ್ರೋಶಕ್ಕೂ, ಈ ದುರ್ಘಟನೆಗೂ ಕಾರಣವಾಗಿದೆ. ಹಾಗಾಗಿ ಸರ್ಕಾರಗಳು ಹಾಗೂ ಜಿಲ್ಲಾಡಳಿತ ಈ ದುರ್ಘಟನೆಯ ಹೊಣೆಯನ್ನು ಹೊತ್ತುಕೊಳ್ಳಬೇಕಿದೆ. ರೈತರನ್ನು ಕಾಡುವ ಬದಲು ನಷ್ಟಕ್ಕೊಳಗಾಗಿರುವ ರೈತರಿಗೆ ಕೂಡಲೇ ನಷ್ಟ ಪರಿಹಾರ ಕಟ್ಟಿಕೊಟ್ಟು, ರೈತರ ಸಭೆಯನ್ನು ಕರೆದು ಮೂಲ ಸಮಸ್ಯೆಯನ್ನು ನ್ಯಾಯಸಮ್ಮತವಾಗಿ ಬಗೆಹರಿಸುವ ಅಗತ್ಯವಿದೆ. ಈ ಬಾರಿಯ ಚಳವಳಿ ಐಕ್ಯ ನಾಯಕತ್ವದಲ್ಲಿ ನಡೆಯದೆ ಹಲವಾರು ಕೇಂದ್ರಗಳಾಗಿ ನಡೆದದ್ದೂ ಸಹ ಈ ಗೊಂದಲಕ್ಕೆ ಇಂಬು ಕೊಟ್ಟಿದೆ. ರೈತ ಚಳವಳಿಯ ಭಾಗವಾಗಿ ನಾವೂ ಆತ್ಮಾವಲೋಕನ ಮಾಡಿಕೊಳ್ಳುವ ವಿಚಾರಗಳು ಇವೆ ಎಂದರು.


