ಬೆಂಗಳೂರು: ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ರಾಜ್ಯ ಸರ್ಕಾರ ಭದ್ರತೆಯನ್ನು ಹೆಚ್ಚಿಸಿದ್ದು, ಅತ್ಯಾಧುನಿಕ ಭದ್ರತಾ ಸಾಧನಗಳನ್ನು ಅಳವಡಿಸಿದೆ.
ವಿಧಾನಸೌಧದ ಪ್ರವೇಶ ದ್ವಾರಗಳಲ್ಲಿ ಹೊಸದಾಗಿ ಅಳವಡಿಸಿರುವ ಮೆಟಲ್ ಡಿಟೆಕ್ಟರ್, ಬ್ಯಾಗ್ ಸ್ಕ್ಯಾನರ್‌ಗಳನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಶುಕ್ರವಾರ ಪರಿಶೀಲನೆ ನಡೆಸಿದರು.
ಮುಖ್ಯಮಂತ್ರಿಯವರು ಕರೆದಿದ್ದ ಸಭೆಯಲ್ಲಿ ಭಾಗವಹಿಸಿ ಬಳಿಕ ಭದ್ರತೆಯನ್ನು ಪರಿಶೀಲನೆ ನಡೆಸಿ, ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಕರಿಬಸವನಗೌಡ ಅವರಿಂದ ಮಾಹಿತಿ ಪಡೆದರು. ಮೆಟಲ್ ಡಿಟೆಕ್ಟರ್, ಬ್ಯಾಗ್ ಸ್ಕ್ಯಾನರ್‌ಗಳ ಗುಣಮಟ್ಟತೆಯ ಬಗ್ಗೆ ವಿಚಾರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧ ಭದ್ರತಾ ವಿಭಾಗದ ವ್ಯಾಪ್ತಿಗೆ ಬರುವ ವಿಧಾನಸೌಧದ 4 ಗೇಟ್, ವಿಕಾಸಸೌಧದ 3 ಗೇಟ್, ಹೈಕೋರ್ಟ್‌ನ 6 ಗೇಟ್, ರಾಜಭವನ ಪ್ರವೇಶ ದ್ವಾರಗಳಲ್ಲಿ ಹೊಸದಾಗಿ ಉನ್ನತ ಗುಣಮಟ್ಟದ ಬ್ಯಾಗ್ ಸ್ಕ್ಯಾನರ್, ಮೆಟಲ್ ಡಿಟೆಕ್ಟರ್, ಕ್ಯೂಆರ್ ಕೋಡ್ ಯಂತ್ರ ಸೇರಿದಂತೆ ಇನ್ನಿತರ ಉಪಕರಣಗಳನ್ನು ಭದ್ರತೆಗೆ ಅಳವಡಿಸಲಾಗಿದೆ, ಇನ್ನು ಮುಂದೆ ಆನ್‌ಲೈನ್ ಮೂಲಕ ವಿಧಾನಸೌಧ ಪ್ರವೇಶದ ಪಾಸ್‌ಗಳನ್ನು ವಿತರಿಸಲಾಗುತ್ತದೆ. ಪಾಸ್ ಮತ್ತು ಗುರುತಿನ ಕಾರ್ಡ್‌ಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಆನ್‌ಲೈನ್ ಮೂಲಕ ಪಡೆದ ಕ್ಯೂಆರ್ ಕೋಡ್ ಪಾಸ್‌ಗಳನ್ನು ಪರಿಶೀಲಿಸಲಿದ್ದಾರೆ. ಗುಣಮಟ್ಟದ ಉಪಕರಣಗಳನ್ನು ಅಳವಡಿಸಿರುವುದರಿಂದ, ಯಾರಾದರೂ ಅನುಮಾನಸ್ಪದ ವಸ್ತುಗಳನ್ನು ತೆಗೆದುಕೊಂಡು ಬಂದರೆ ಪತ್ತೆ ಹಚ್ಚಲು ಸುಲಭವಾಗುತ್ತವೆ ಎಂದು ಹೇಳಿದರು.
ಈ ಎಲ್ಲಾ ಉಪಕರಣಗಳು ಮೂರು ವರ್ಷದ ಹಿಂದೆಯೇ ಹಾಳಾಗಿದ್ದವು. ನಾವು ಈಗ ಅಳವಡಿಸಿದ್ದೇವೆ. ಸುರಕ್ಷತೆ ದೃಷ್ಟಿಯಿಂದ ಅವಶ್ಯಕತೆ ಇತ್ತು. ಇನ್ನು ಮುಂದೆ ಕೈಯಿಂದ ಪಾಸ್‌ಗಳನ್ನು ವಿತರಿಸುವುದಿಲ್ಲ ಎಂದು ತಿಳಿಸಿದರು.
ಸಾರ್ವಜನಿಕರು ಪೂರ್ವಭಾಗದ ಗೇಟ್‌ನಿಂದ ಬರಬೇಕು. ಪಶ್ಚಿಮ ದ್ವಾರದಿಂದ ಗಣ್ಯರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಧಾನಸೌಧಕ್ಕೆ ಬಿಗಿ ಭದ್ರತೆಯನ್ನು ಇನ್ನಷ್ಟು ಕಠಿಣ ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ಈಗಾಗಲೇ ಕೆಎಸ್ಐಎಸ್ಎಫ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ವಿಧಾನಸೌಧದ ಭದ್ರತೆಯಲ್ಲಿ ಮತ್ತಷ್ಟು ಮಾರ್ಪಾಡು ತರಲಾಗುವುದು ಎಂದು ವಿವರಿಸಿದರು.
ಅಧಿವೇಶನದಲ್ಲಿ ಬೇಕಾಬಿಟ್ಟಿ ಜನಗಳನ್ನು ಬಿಡುವುದಿಲ್ಲ. ಯಾರೋ ಪಾಸ್ ಪಡೆದು ಸಂಸತ್ ಭವನ ಪ್ರವೇಶಿಸಿ, ದಾಂಧಲೆ ಎಬ್ಬಿಸಿದ್ದರು. ಆ ರೀತಿಯ ಘಟನೆಗಳು ಸಂಭವಿಸಬಾರದು ಎಂಬ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಲಾಗಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ, ಸಚಿವರು, ಸಚಿವಾಲಯ, ವಿಧಾನಸಭೆ ಇದೆ. ಇದೆಲ್ಲವನ್ನು ಕಾಪಾಡಿಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಪಾಸ್ ಸಿಗುವುದು ಹೇಗೆ?
- ಪಾಸ್ ಬಯಸುವವರು ಆ್ಯಂಡ್ರಾಯ್ಡ ಮೊಬೈಲ್‌ನಲ್ಲಿ ಕರ್ನಾಟಕ ಒನ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
- ತಮ್ಮ ಮೊಬೈಲ್ ಸಂಖ್ಯೆ ನೋಂದಾಯಿಸಿ, ಒಟಿಪಿ ದಾಖಲಿಸಿ, ಆ್ಯಪ್ ತೆರೆಯಬೇಕು.
- ತಮ್ಮ ಹೆಸರು, ವಿಳಾಸ, ಆಧಾರ್ ಸಂಖ್ಯೆ ಮತ್ತಿ ತರ ಮಾಹಿತಿ ಭರ್ತಿ ಮಾಡಬೇಕು.
- ಅನಂತರ ವಿಧಾನಸೌಧ ಅಥವಾ ವಿಕಾಸಸೌಧ ವನ್ನು ಆಯ್ಕೆ ಮಾಡಿಕೊಳ್ಳಬೇಕು.
- ಅಧಿಕಾರಿಗಳು ದಾಖಲೆ ಪರಿಶೀಲಿಸಿ, ಕ್ಯುಆರ್ ಕೋಡ್ ಸ್ಕ್ಯಾನರ್ ಲಿಂಕ್ ಕಳುಹಿಸುತ್ತಾರೆ.
- ಈ ಲಿಂಕನ್ನು ಪೊಲೀಸ್ ಭದ್ರತ ಸಿಬಂದಿ ಸ್ಕ್ಯಾನ್ ಮಾಡುತ್ತಾರೆ. ಇಲ್ಲಿ ಯಶಸ್ವಿಯಾದರೆ ಪ್ರವೇಶ ಲಭ್ಯ. ಇಲ್ಲವಾದರೆ ನಿರ್ಬಂಧ.