ಇಂಡಿ : ಮೇ ೭ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಅರ್ಹ ಮತದಾರರು ಕಡ್ಡಾಯವಾಗಿ ಮತ ಹಾಕುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ತಾಲೂಕು ಸ್ವೀಫ್ ಸಮಿತಿ, ಗ್ರಾಪಂ ಹಿರೇರೂಗಿ ವತಿಯಿಂದ ‘ರಂಗೋಲಿ ಬಿಡಿಸುವ ಮೂಲಕ ಪ್ರಜಾಪ್ರಭುತ್ವದಲ್ಲಿ ಮತದಾನವೇ ಹಬ್ಬ’ ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚುನಾವಣಾ ಪ್ರಕ್ರಿಯೆ ಪ್ರಜಾಪ್ರಭುತ್ವದ ಸೌಂದರ್ಯ ಹೆಚ್ಚಿಸುತ್ತದೆ. ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ನಾವು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಇಒ ನೀಲಗಂಗಾ ಬಬಲಾದ , ಪಿಡಿಓ ಬಸವರಾಜ ಬಬಲಾದ,
ಮತದಾನ ಜಾಗೃತಿಯ ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿ ರಾಜೇಶ ಪವಾರ ಮಾತನಾಡಿದರು.
ಈ ಸಂದರ್ಭದಲ್ಲಿ ನಾಮಫಲಕಗಳನ್ನು ಹಿಡಿದು
ಘೋಷಣೆ ಕೂಗುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಜಾಗೃತಿ ಮೂಡಿಸಲಾಯಿತು. ಶಾಲೆಯಲ್ಲಿ ಮತದಾನ ಜಾಗೃತಿಯ ರಂಗೋಲಿ ಬಿಡಿಸಿದ್ದು ವಿಶೇಷವಾಗಿತ್ತು. ಶಾಲಾ ಮಕ್ಕಳು ತಮ್ಮ ಪಾಲಕರಿಗೆ ಪತ್ರ ಬರೆದು ಮತದಾನದ ಜಾಗೃತಿ ಮೂಡಿಸಿದರು.
ತಾ.ಪಂ ಸಹಾಯಕ ನಿರ್ದೇಶಕ ಸಂಜಯ ಖಡಗೇಕರ, ಶಾಲಾ ಮುಖ್ಯ ಶಿಕ್ಷಕರಾದ ಅನಿಲ ಪತಂಗಿ, ವ್ಹಿ ವೈ ಪತ್ತಾರ, ಎ ಎಂ ಬೆದ್ರೇಕರ, ಯುವಕರಾದ ಪರಶುರಾಮ ಹೊಸಮನಿ, ಸಂತೋಷ ಕೋಟಗೊಂಡ ಹಾಗೂ ಶಿಕ್ಷಕ ಸಿಬ್ಬಂದಿ, ಗ್ರಾಪಂ ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮಸ್ತರು, ಮಕ್ಕಳು ಪಾಲ್ಗೊಂಡಿದ್ದರು. ಶಿಕ್ಷಕ ಎಸ್ ಆರ್ ಚಾಳೇಕರ ಮತದಾನ ಜಾಗೃತಿಯ ಪ್ರತಿಜ್ಞಾ ವಿಧಿ ಬೋಧಿಸಿದರು.